ಕೊಹ್ಲಿ-ಜಡೇಜ ಸಾಹಸ: ಸೋಲಿನಿಂದ ಪಾರಾದ ಭಾರತ
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ರೋಚಕ ಡ್ರಾ

ರಾಜ್‌ಕೋಟ್, ನ.13: ನಾಯಕ ವಿರಾಟ್ ಕೊಹ್ಲಿ ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜ ಅವರ ಸಂದರ್ಭೋಚಿತ ಬ್ಯಾಟಿಂಗ್‌ನ ನೆರವಿನಿಂದ ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ರೋಚಕ ಡ್ರಾ ಸಾಧಿಸಿದೆ.
ರವಿವಾರ ಇಲ್ಲಿ ಗೆಲ್ಲಲು 310 ರನ್ ಸವಾಲು ಪಡೆದಿದ್ದ ಆತಿಥೇಯ ಭಾರತ ಕಳಪೆ ಆರಂಭ ಪಡೆದಿತ್ತು. ಹಿರಿಯ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಖಾತೆ ತೆರೆಯಲು ವಿಫಲರಾದರು. ವಿಜಯ್(31) ಹಾಗೂ ಅಶ್ವಿನ್(32) ಎರಡಂಕೆಯ ಸ್ಕೋರ್ ದಾಖಲಿಸಿದರು.
ಭಾರತ ಒಂದು ಹಂತದಲ್ಲಿ 132 ರನ್‌ಗೆ 6 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಆಗ 7ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 40 ರನ್ ಸೇರಿಸಿದ ಕೊಹ್ಲಿ(ಅಜೇಯ 40ರನ್, 98 ಎಸೆತ, 6 ಬೌಂಡರಿ) ಹಾಗೂ ರವೀಂದ್ರ ಜಡೇಜ(ಅಜೇಯ 32) ತಂಡವನ್ನು ಸಂಭಾವ್ಯ ಸೋಲಿನಿಂದ ಪಾರು ಮಾಡಿದರು. 64 ರನ್‌ಗೆ 3 ವಿಕೆಟ್‌ಗಳನ್ನು ಕಬಳಿಸಿದ ಆದಿಲ್ ರಶೀದ್ ಭಾರತಕ್ಕೆ ನಡುಕ ಹುಟ್ಟಿಸಿದ್ದರು.
ಇಂಗ್ಲೆಂಡ್ 260/3: ಇದಕ್ಕೆ ಮೊದಲು ಇಂಗ್ಲೆಂಡ್ ತಂಡ ನಾಯಕ ಅಲೆಸ್ಟೈರ್ ಕುಕ್ ಬಾರಿಸಿದ 30ನೆ ಶತಕ (130)ಹಾಗೂ 19ರ ಹರೆಯದ ಯುವ ಆರಂಭಿಕ ಆಟಗಾರ ಹಸೀಬ್ ಹಮೀದ್(82) ನೆರವಿನಿಂದ 3 ವಿಕೆಟ್‌ಗಳ ನಷ್ಟಕ್ಕೆ 260 ರನ್‌ಗೆ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಭಾರತದ ಗೆಲುವಿಗೆ 310 ರನ್ ಗುರಿ ನೀಡಿತು.
ಕುಕ್ ಭಾರತ ವಿರುದ್ಧ ಅದರದೇ ನೆಲದಲ್ಲಿ ಐದನೆ ಬಾರಿ ಶತಕ ಬಾರಿಸಿದ ಪ್ರವಾಸಿ ತಂಡದ ಮೊದಲ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ವೀಕ್ಸ್, ಲಾಯ್ಡ್ ಹಾಗೂ ಹಾಶಿಮ್ ಅಮ್ಲ ಭಾರತ ವಿರುದ್ಧ ತಲಾ ನಾಲ್ಕು ಶತಕಗಳನ್ನು ಬಾರಿಸಿದ ಸಾಧನೆ ಮಾಡಿದ್ದಾರೆ.
ಕುಕ್ ಹಾಗೂ ಹಮೀದ್ ಅಂತಿಮ ದಿನದಾಟವಾದ ರವಿವಾರ ವಿಕೆಟ್ ನಷ್ಟವಿಲ್ಲದೆ 114 ರನ್‌ನಿಂದ ಬ್ಯಾಟಿಂಗ್‌ನ್ನು ಮುಂದುವರಿಸಿ ಮೊದಲ ವಿಕೆಟ್‌ಗೆ 180 ರನ್ ಜೊತೆಯಾಟ ನಡೆಸಿದರು. ಕುಕ್ 194 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ ಶತಕ ಪೂರೈಸಿದರು. ಭೋಜನ ವಿರಾಮದಲ್ಲಿ ಅಜೇಯ 106 ರನ್ ಗಳಿಸಿರುವ ಕುಕ್ ಅವರು ಸ್ಟೋಕ್ಸ್(6) ಅವರೊಂದಿಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ. 82 ರನ್‌ಗೆ ಸ್ಪಿನ್ನರ್ ಅಮಿತ್ ಮಿಶ್ರಾಗೆ ರಿಟರ್ನ್ ಕ್ಯಾಚ್ ನೀಡಿ ಕೇವಲ 18 ರನ್‌ನಿಂದ ಚೊಚ್ಚಲ ಶತಕ ವಂಚಿತರಾದ ಹಮೀದ್ ಔಟಾಗುವ ಮೊದಲು 177 ಎಸೆತಗಳನ್ನು ಎದುರಿಸಿ 7 ಬೌಂಡರಿ, 1 ಸಿಕ್ಸರ್ ಬಾರಿಸಿದರು.







