ಸಿಎಂ ಕೈಗೊಳ್ಳುವ ಯಾವುದೇ ಕ್ರಮಕ್ಕೆ ಬದ್ಧ: ತನ್ವೀರ್

ಬೆಂಗಳೂರು, ನ.13: ಸಿಎಂ ಸಿದ್ದರಾಮಯ್ಯ ಅವರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ.
ರವಿವಾರ ಸಿಎಂ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಸುದೀರ್ಘ ಒಂದೂವರೆ ಗಂಟೆ ಕಾಲ ಚರ್ಚಿಸಿದ ನಂತರ ಆಚೆ ಬಂದು ಮಾಧ್ಯಮದ ಜತೆ ಮಾತನಾಡಿ, ಮುಖ್ಯಮಂತ್ರಿಗಳಿಗೆ ಟಿಪ್ಪು ಜಯಂತಿ ದಿನ ರಾಯಚೂರಿನ ಸಮಾರಂಭದ ವೇದಿಕೆಯಲ್ಲಿ ನಡೆದ ಘಟನೆಯ ಸಂಪೂರ್ಣ ವಿವರವನ್ನು ನೀಡಿದ್ದೇನೆ. ಅವರಿಗೆ ಅಲ್ಲಿನ ವಸ್ತುಸ್ಥಿತಿಯ ಅರಿವು ಮೂಡಿಸಿದ್ದೇನೆ ಎಂದು ಹೇಳಿದ್ದಾರೆ.
ಪಕ್ಷ ಮತ್ತು ಸರಕಾರ ಹಾಗೂ ಸಾರ್ವಜನಿಕ ಜೀವನದಲ್ಲಿ ಜನತೆಗೆ ದ್ರೋಹ ಬಗೆಯುವ ಕೆಲಸ ನನ್ನಿಂದ ಆಗಿಲ್ಲ. ನನ್ನ ವಿರುದ್ಧದ ಯಾವುದೇ ತನಿಖೆಗೆ ನಾನು ಬದ್ಧವಾಗಿದ್ದೇನೆ. ತಾವು ವಿಧಿಸುವ ಶಿಕ್ಷೆಯನ್ನು ನಾನು ಎದುರಿಸುತ್ತೇನೆ ಎಂಬ ವಿಚಾರವನ್ನು ಸಿಎಂಗೆ ತಿಳಿಸಿದ್ದೇವೆ. ಅವರು ಸಮಾಲೋಚಿಸಿ ಯಾವುದೇ ಶಿಕ್ಷೆ ವಿಧಿಸಿದರೂ, ಅದನ್ನು ಪಾಲಿಸುತ್ತೇನೆ. ನನ್ನಿಂದ ಪಕ್ಷಕ್ಕೆ, ಸರಕಾರಕ್ಕೆ ಮುಜುಗರವಾಗದಂತೆ ನಡೆದುಕೊಳ್ಳುತ್ತೇನೆ ಎಂದು ವಿವರಿಸಿದ್ದಾರೆ.
ಖಾಸಗಿ ಮಾಧ್ಯಮವೊಂದರಲ್ಲಿ ಪ್ರಸಾರವಾದ ಸುದ್ದಿಯಲ್ಲಿ ಎರಡು ಸೆಕೆಂಡ್ಗಳ ದೃಶ್ಯಾವಳಿಯನ್ನು ಪ್ರಕಟಿಸಲಾಗುತ್ತಿದೆ. ಅದನ್ನು ಸಾರ್ವಜನಿಕವಾಗಿ, ರಾಷ್ಟ್ರವ್ಯಾಪ್ತಿಯಾಗಿ ಇದು ಬಿತ್ತರವಾಗುತ್ತಿದೆ. ಇದರ ಸಂಪೂರ್ಣ ಮಾಹಿತಿ ಸಾರ್ವಜನಿಕರಿಗೆ ತಲುಪಿಸಬೇಕಿದೆ. ಇದರ ಜವಾಬ್ದಾರಿ ನನ್ನ ಮೇಲೆ ಇದೆ. ಇದರಿಂದಲೇ ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಯಾವುದೇ ಖಾಸಗಿ ಉದ್ದೇಶ ಇಟ್ಟುಕೊಂಡು ಖಾಸಗಿ ವಾಹಿನಿ ಮೇಲೆ ದೂರು ನೀಡಿಲ್ಲ. ಕೇವಲ ಎರಡು ಮೂರು ಕ್ಷಣಗಳ ದೃಶ್ಯ ಬಿತ್ತರಿಸುವ ಸಂದರ್ಭದಲ್ಲಿ ಒಟ್ಟಾರೆ ತೆಗೆದುಕೊಂಡ ಎಡಿಟ್ ಆಗದ ಸಗಟು ಚಿತ್ರೀಕರಣದ ದಾಖಲೆಯನ್ನು ನೀಡುವಂತೆ ಕೇಳಿದ್ದೇನೆ. ಇದನ್ನು ಕೊಡಿಸುವ ಕೆಲಸ ಆಗಬೇಕು ಅಥವಾ ವಶಪಡಿಸಿಕೊಂಡು ತಮಗೆ ನೀಡಬೇಕೆಂದು ದೂರು ಸಲ್ಲಿಸಿದ್ದೇನೆ. ಟಿವಿ ವಾಹಿನ ಬಗೆಗಿನ ಮತ್ಸರಕ್ಕೆ ಈ ಕಾರ್ಯ ಮಾಡಿಲ್ಲ ಎಂದು ವಿವರಿಸಿದ್ದಾರೆ.
ಖಾಸಗಿ ವಾಹಿನಿ ವರದಿಗಾರರ ಬಳಿ ಸಂಪೂರ್ಣ ವೀಡಿಯೊ ರೆಕಾರ್ಡ್ ಕೊಡಿ ಎಂದು ಕೇಳಿದಾಗ ಅದನ್ನು ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು. ಪಡೆಯುವ ವಿಧಾನ ದೂರು ನೀಡಿ ಪಡೆಯುವುದು ಮಾತ್ರ. ನನ್ನ ದೂರಿನಲ್ಲಿ ಸಗಟು ವೀಡಿಯೊವನ್ನು ವಶಪಡಿಸಿಕೊಂಡು ನನಗೆ ಒದಗಿಸುವಂತೆ ಕೋರಿದ್ದೇನೆ ಎಂದು ಹೇಳಿದರು.







