ಹೊಸ ನೋಟು ಕೈಸೇರಿದರೂ ಗ್ರಾಹಕರಿಗೆ ತಪ್ಪದ ಕಾಟ!

ಮಂಗಳೂರು, ನ.13: ಕೇಂದ್ರ ಸರಕಾರವು 2 ಸಾವಿರ ರೂ. ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆಗೊಳಿಸಿದ್ದರೂ ಕೂಡ ಗ್ರಾಹಕರಿಗೆ ‘ಚಿಲ್ಲರೆ’ಯ ಕಾಟ ತಪ್ಪಲಿಲ್ಲ. ಯಾಕೆಂದರೆ, ಬ್ಯಾಂಕ್‌ನಿಂದ ಹಣ ವಿನಿಮಯ ಅಥವಾ ನಗದು ಡ್ರಾ ಮಾಡಿದಾಗ ಲಭ್ಯವಾದ 2 ಸಾವಿರ ರೂ. ಮುಖಬೆಲೆಯ ನೋಟುಗಳ ಮೂಲಕ ಯಾವುದೇ ಅಂಗಡಿಮುಂಗಟ್ಟುಗಳಲ್ಲಿ ವ್ಯವಹಾರ ನಡೆಸಲು ಸಾಧ್ಯವಾಗುತ್ತಿಲ್ಲ. ಸಾಮಗ್ರಿಗಳನ್ನು ಖರೀದಿಸಿದ ಬಳಿಕ ಗ್ರಾಹಕರಿಗೆ ನೀಡಬೇಕಾದ ‘ಚಿಲ್ಲರೆ’ಯು ಅಂಗಡಿ ವ್ಯಾಪಾರಿಗಳಲ್ಲೂ ಇಲ್ಲವಾಗಿದೆ. ಹಾಗಾಗಿ ವ್ಯಾಪಾರಿಗಳು ಮತ್ತು ಗ್ರಾಹಕರು ಯಾವುದೇ ವ್ಯವಹಾರ ನಡೆಸಲಾಗದೆ ಸಮಸ್ಯೆಗೆ ಸಿಲುಕಿದ್ದಾರೆ. ಇದರಿಂದ ವ್ಯಾಪಾರ ಭಾಗಶ: ಕುಂಠಿತಗೊಂಡಿದೆ.
ರಜಾದಿನವಾದ ರವಿವಾರ ಬ್ಯಾಂಕ್ ಶಾಖೆಗಳು ತೆರೆದಿದ್ದು, ಮಧ್ಯಾಹ್ನವಾಗುತ್ತಲೇ ಬಹುತೇಕ ಗ್ರಾಹಕರು ಹಣ ವಿನಿಮಯ ಮಾಡಿಕೊಂಡಿದ್ದಾರೆ. ಬಳಿಕ ಹಣವಿಲ್ಲದೆ ಬರಿಗೈಯಲ್ಲಿ ಮರಳಿದ್ದಾರೆ. ಎಟಿಎಂಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಇನ್ನು ಕೆಲವು ಕಡೆಯ ಬ್ಯಾಂಕ್ ಶಾಖೆಗಳು, ಎಟಿಎಂಗಳು ‘ಹಣ’ವಿಲ್ಲದ ಕಾರಣ ತೆರೆಯಲೇ ಇಲ್ಲ.
ಇಲ್ಲಿ 500, 1,000ರ ನೋಟು ಸ್ವೀಕರಿಸಲಾಗುವುದು
500, 1,000ರ ನೋಟುಗಳ ವ್ಯವಹಾರ ಇಲ್ಲ ಎಂದು ಬಹುತೇಕ ಅಂಗಡಿಮುಂಗಟ್ಟು, ಹೊಟೇಲು ಮತ್ತಿತರ ಕಡೆ ಬೋರ್ಡ್ ತಗಲಿಸಿದ್ದರು. ಆದರೆ, ಇದೀಗ ಕೆಲವು ಅಂಗಡಿಮುಂಗಟ್ಟುಗಳಲ್ಲಿ ಅದರಲ್ಲೂ ಹೊಸತಾಗಿ ತೆರೆದ ಮಳಿಗೆಗಳಲ್ಲಿ 500, 1,000ರ ಅಮಾನ್ಯಗೊಂಡ ನೋಟುಗಳನ್ನು ಸ್ವೀಕರಿಸಲಾಗುವುದು ಎಂದು ಬೋರ್ಡ್ ಹಾಕಿರುವುದು ಕಂಡು ಬಂದಿದೆ.
ಹಳೆಯ ನೋಟ್ ಬಳಕೆಗೆ ಅವಕಾಶ
ಹಳೆಯ 500 ರೂ. ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ಸ್ವೀಕರಿಸುವ ಅವಧಿಯನ್ನು ನ.14ರವರೆಗೆ ವಿಸ್ತರಿಸಿರುವ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ಪಾವತಿಸುವವರು ನ.14ರಂದು ನಿಗದಿಗೊಳಿಸಿದ ಬ್ಯಾಂಕ್ ಅಥವಾ ಮಂಗಳೂರು ಒನ್ ಸೇವಾಕೇಂದ್ರಗಳಲ್ಲಿ ಹಳೆಯ ನೋಟುಗಳನ್ನು ಪಾವತಿಸಬಹುದು ಎಂದು ಮನಪಾ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







