ಮೂಡುಬಿದಿರೆ : ಆಳ್ವಾಸ್ ಚಿತ್ರಸಿರಿ, ಆಳ್ವಾಸ್ ಛಾಯಾಚಿತ್ರಸಿರಿ ಪ್ರಶಸ್ತಿ ಪ್ರದಾನ

ಮೂಡುಬಿದಿರೆ, ನ.13: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಚಿತ್ರ ಕಲಾಶಿಬಿರ ಆಳ್ವಾಸ್ ಚಿತ್ರಸಿರಿಯ ಸಮಾರೋಪ ಸಮಾರಂಭದಲ್ಲಿ ಹಿರಿಯ ಚಿತ್ರಕಲಾವಿದ ಜಿ.ಎಲ್.ಎನ್ ಸಿಂಹ ಅವರಿಗೆ ಆಳ್ವಾಸ್ ಚಿತ್ರಸಿರಿ ಹಾಗೂ ಖ್ಯಾತ ಛಾಯಾಚಿತ್ರಕಾರ ಟಿ.ಎನ್.ಎ ಪೆರುಮಾಳ್ ಅವರಿಗೆ ಆಳ್ವಾಸ್ ಛಾಯಾಚಿತ್ರಸಿರಿ ಪ್ರಶಸ್ತಿಯನ್ನು ವಿದ್ಯಾಗಿರಿಯ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ರವಿವಾರ ಪ್ರದಾನ ಮಾಡಲಾಯಿತು.
ಬೆಂಗಳೂರು ಆಯುಕ್ತರ ಕಚೇರಿಯ ಚಿತ್ರಕಲಾವಿಭಾಗದ ಸಹಾಯಕ ನಿರ್ದೇಶಕ ಮಹಾಂತೇಶ್ ಕಂಠಿ ಮುಖ್ಯ ಅತಿಥಿಯಾಗಿ ಮಾತನಾಡಿ, ಸರಕಾರಗಳು ಕಲೆಗಾಗಿ ಮಾಡಬೇಕಾದ ಕೆಲಸವನ್ನು ಆಳ್ವಾಸ್ ಚಿತ್ರಸಿರಿ ಮುಖಾಂತರ ಡಾ.ಎಂ ಮೋಹನ ಆಳ್ವ ಮಾಡುತ್ತಿದ್ದಾರೆ. ನಾಡು, ನುಡಿಯ ಉಳಿವಿಗಾಗಿ ಡಾ.ಆಳ್ವ ಹಾಗೂ ಧಾರ್ಮಿಕ ಜಾಗೃತಿಗಾಗಿ ಶ್ರೀಕ್ಷೇತ್ರ ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಮಾಡುತ್ತಿರುವ ಸೇವೆ ಅನನ್ಯ. ಶೈಕ್ಷಣಿಕವಾಗಿ ಹೆಸರು ಮಾಡುತ್ತಿರುವ ಮೂಡುಬಿದಿರೆಯಲ್ಲಿ ಆಳ್ವಾಸ್ ಹಮ್ಮಿಕೊಳ್ಳುವ ಕಲಾಶಿಬಿರಗಳಲ್ಲಿ ಮೂಡಿಬರುವ ಚಿತ್ರಕಲೆಗಳಿಗೆ ಆರ್ಟ್ ಗ್ಯಾಲರಿ ರೂಪು ಬರಬೇಕು. ಇಲ್ಲಿಗೆ ಬರುವ ಪ್ರವಾಸಿಗಾರಿಗೆ ಆಕರ್ಷಣೆಯ ಕೇಂದ್ರಬಿಂದುವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಳ್ವಾಸ್ ಸಂಸ್ಥೆಯು ವೈವಿಧ್ಯಪೂರ್ಣ ಕೆಲಸಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಅರಳಿಸಲು ಪ್ರಯತ್ನಿಸುತ್ತಿದೆ. ವಿದ್ಯಾರ್ಥಿಗಳು ಕಾಲ ಕಾಲಕ್ಕೆ ಮೇಲ್ದರ್ಜೆಗೇರಲು ಸೂಕ್ಷ್ಮತೆಗಳನ್ನು ಗ್ರಹಿಸುವ ಪ್ರಜ್ಞೆಯನ್ನು ಬೆಳೆಸಬೇಕು ಎಂದರು.
ಜಿ.ಎಲ್.ಎನ್ ಸಿಂಹ ಅವರ ಕುರಿತು ಮೈಸೂರು ರಾಮ್‌ಸನ್ಸ್ ಕಲಾ ಪ್ರತಿಷ್ಠಾನದ ಕಾರ್ಯದರ್ಶಿ ಆರ್.ಜಿ ಸಿಂಘ್ ಹಾಗೂ ಟಿ.ಎನ್.ಎ ಪೆರುಮಾಳ್ ಅವರ ಕುರಿತು ಅಸ್ಟ್ರೋ ಮೋಹನ್ ಅಭಿನಂದನಾ ಬಾಷಣ ಮಾಡಿದರು. ಆಳ್ವಾಸ್ ಚಿತ್ರಸಿರಿ ಫೋಟೋ ಸ್ಪರ್ಧೆಗಳಲ್ಲಿ ವಿಚೇತರಾದವರಿಗೆ ಬಹುಮಾನ ವಿತರಿಸಲಾಯಿತು. ಚಿತ್ರಸಿರಿಯಲ್ಲಿ ಭಾಗವಹಿಸಿದ ಕಲಾವಿದರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಆಳ್ವಾಸ್ ಚಿತ್ರಸಿರಿ ಕಲಾ ಶಿಬಿರ ಸಲಹಾ ಸಮಿತಿಯ ಕೋಟಿ ಪ್ರಸಾದ್ ಆಳ್ವ, ಗಣೇಶ್ ಸೋಮಯಾಜಿ, ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು. ಚಿತ್ರ ಕಲಾವಿದರಾದ ಬಾಗೂರು ಮಾರ್ಕಂಡೇಯ, ಡಾ.ಸುನಿತಾ ಪಾಟೀಲ್ ಅನಿಸಿಕೆ ವ್ಯಕ್ತಪಡಿಸಿದರು. ಡಾ.ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು.







