ನೋಟು ನಿಷೇಧದ ಬಳಿಕ ಬ್ಯಾಂಕುಗಳಿಂದ 30,000 ಕೋ.ರೂ.ನಗದು ವಿತರಣೆ

ಮುಂಬೈ,ನ.13: 500 ಮತ್ತು 1,000 ರೂ.ನೋಟುಗಳ ನಿಷೇಧದ ಬಳಿಕ ಬ್ಯಾಂಕುಗಳು ಕಡಿಮೆ ಮುಖಬೆಲೆಯ ಮತ್ತು ಹೊಸದಾಗಿ ಬಿಡುಗಡೆಗೊಂಡಿರುವ 2,000 ರೂ.ಗಳ ನೋಟುಗಳಲ್ಲಿ ಸುಮಾರು 30,000 ಕೋ.ರೂ.ಗಳ ನಗದು ಹಣವನ್ನು ವಿತರಿಸಿವೆ ಎಂದು ಭಾರತೀಯ ಬ್ಯಾಂಕುಗಳ ಸಂಘ(ಐಬಿಎ)ವು ರವಿವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಹೊಸ 500 ರೂ. ಮತ್ತು 2,000 ರೂ.ಗಳ ನೋಟುಗಳ ವಿತರಣೆಗಾಗಿ ಎಟಿಎಂ ಯಂತ್ರಗಳಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಲಾಗುತ್ತಿದೆ ಎಂದೂ ಅದು ತಿಳಿಸಿದೆ.
ಭಾರತೀಯ ರಿಜರ್ವ್ ಬ್ಯಾಂಕ್ ನಿಗದಿಗೊಳಿಸಿರುವ ಮಿತಿಗನುಗುಣವಾಗಿ ಗ್ರಾಹಕರ ನಗದು ಹಣದ ಅಗತ್ಯಗಳನ್ನು ಪೂರೈಸಲು ಬ್ಯಾಂಕುಗಳು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿವೆ ಎಂದು ಹೇಳಿಕೆಯು ತಿಳಿಸಿದೆಯಾದರೂ, ತಮ್ಮ ವಹಿವಾಟುಗಳಿಗಾಗಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು,ಆರ್‌ಟಿಜಿಎಸ್, ನೆಫ್ಟ್, ಐಎಂಪಿಎಸ್, ನೆಟ್ ಬ್ಯಾಂಕಿಂಗ್ ಮತ್ತು ಯುಪಿಐನಂತಹ ಹಣ ಪಾವತಿಯ ಇತರ ವಿಧಾನಗಳನ್ನು ಬಳಸಿಕೊಳ್ಳುವಂತೆ ಸಾರ್ವಜನಿಕರನ್ನು ಕೋರಿದೆ. ಹಣಪಾವತಿಗಾಗಿ ಬ್ಯಾಂಕುಗಳು ಒದಗಿಸಿರುವ ಇಲೆಕ್ಟ್ರಾನಿಕ್ ವ್ಯಾಲೆಟ್‌ಗಳನ್ನೂ ವ್ಯಾಪಕವಾಗಿ ಬಳಸಿಕೊಳ್ಳಬಹುದು ಎಂದೂ ಅದು ತಿಳಿಸಿದೆ.





