ನಾಗರಿಕ ಸೇವಾ ಪ್ರಧಾನ ಪರೀಕ್ಷೆಗೆ ಮುದ್ರಿತ ಪ್ರವೇಶ ಪತ್ರ ನೀಡುವುದಿಲ್ಲ: ಯುಪಿಎಸ್ಸಿ

ಹೊಸದಿಲ್ಲಿ, ನ.13: ಮುಂದಿನ ತಿಂಗಳಾರಂಭದಿಂದ ನಿಗದಿಯಾಗಿರುವ ಈ ವರ್ಷದ ನಾಗರಿಕ ಸೇವಾ ಪ್ರಧಾನ ಪರೀಕ್ಷೆಗೆ ಕಾಗದ ಮುದ್ರಿತ ಪ್ರವೇಶ ಪತ್ರ ನೀಡಲಾಗುವುದಿಲ್ಲವೆಂದು ಯುಪಿಎಸ್ಸಿ ಹೇಳಿದೆ.
(www.upsc.govt.in) ಯುಪಿಎಸ್ಸಿ ಡಿ.3ರಿಂದ 9ರವರೆಗೆ 23 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಿದೆ. ಆಯೋಗವು ತನ್ನ ಜಾಲತಾಣದಲ್ಲಿ ಇ-ಪ್ರವೇಶ ಪತ್ರಗಳನ್ನು ಅಪ್‌ಲೋಡ್ ಮಾಡಿದೆ. ತಮ್ಮ ಇ-ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ಅಭ್ಯರ್ಥಿಗಳಿಗೆ ಸಲಹೆ ನೀಡುತ್ತಿದ್ದೇವೆ. ಅವರು ಪರೀಕ್ಷೆಗೆ ಮಂಜೂರಾಗಿರುವ ಕೇಂದ್ರದಲ್ಲಿ ಇ-ಪ್ರವೇಶ ಪತ್ರಗಳ ಪ್ರಿಂಟೌಟ್ ತೋರಿಸಬೇಕಾಗುತ್ತದೆಂದು ಅದು ತಿಳಿಸಿದೆ.
ಇ-ಪ್ರವೇಶ ಪತ್ರದಲ್ಲಿ ಅಭ್ಯರ್ಥಿಯ ಭಾವಚಿತ್ರ ಕಾಣಿಸದಿದ್ದಲ್ಲಿ ಅಥವಾ ಅಲಭ್ಯವಾದಲ್ಲಿ ಅವರು. ಆಧಾರ್ ಕಾರ್ಡ್, ಚುನಾವಣಾ ಗುರುತು ಚೀಟಿ, ಚಾಲನಾ ಪರವಾನಿಗೆ, ಪಾಸ್‌ಪೋರ್ಟ್ ಇತ್ಯಾದಿ ಗುರುತು ದಾಖಲೆಗಳ ಜೊತೆ ಅದೇ ರೀತಿಯ ಭಾವಚಿತ್ರವನ್ನು ಪರೀಕ್ಷಾ ಕೇಂದ್ರಕ್ಕೆ ಬರುವಾಗ ತರಬೇಕು. ಈ ಪರೀಕ್ಷೆಗೆ ಆಯೋಗವು ಮುದ್ರಿತ ಪ್ರವೇಶ ಪತ್ರವನ್ನು ನೀಡುವುದಿಲ್ಲವೆಂದು ಸಾರ್ವಜನಿಕ ಸೂಚನೆಯೊಂದರಲ್ಲಿ ಯುಪಿಎಸ್ಸಿ ಹೇಳಿದೆ.
ಅಭ್ಯರ್ಥಿಗಳು ಪ್ರತಿ ಪರೀಕ್ಷೆಗೆ ಪ್ರವೇಶ ಪಡೆಯಲು ಇ-ಪ್ರವೇಶ ಪತ್ರದ ಪ್ರಿಂಟೌಟ್ ತರಬೇಕು ಹಾಗೂ ಲಿಖಿತ ಪರೀಕ್ಷೆಯ ಫಲಿತಾಂಶ ಪ್ರಕಟವಾಗುವವರೆಗೆ ಕಾದಿರಿಸಿಕೊಳ್ಳಬೇಕೆಂದು ಆಯೋಗ ತಿಳಿಸಿದೆ.
ಯಾವುದೇ ತೊಂದರೆಯಾದಲ್ಲಿ ಅಭ್ಯರ್ಥಿಗಳು ಸ್ವತಃ ಯುಪಿಎಸ್ಸಿಯ ಸಹಾಯ ಕೌಂಟರನ್ನು ಸಮೀಪಿಸಬಹುದು ಅಥವಾ 011-23381125, 23098543 ಹಾಗೂ 23385271 ಈ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದು.







