150 ವರ್ಷ ಹಳೆಯ ಕ್ರೈಸ್ತ ವಿಚ್ಛೇದನ ಕಾಯ್ದೆ ತಿದ್ದುಪಡಿಗೆ ಚಳಿಗಾಲದ ಸಂಸದಧಿವೇಶನದಲ್ಲಿ ಮಸೂದೆ

ಹೊಸದಿಲ್ಲಿ, ನ.13: ಪರಸ್ಪರ ಸಮ್ಮತಿಯಿಂ ವಿಚ್ಛೇದನ ಪಡೆಯಲು ಕ್ರೈಸ್ತ ದಂಪತಿಗಳಿಗಿರುವ 2 ವರ್ಷಗಳ ಕಾಯುವಿಕೆಯ ಅವಧಿ ಶೀಘ್ರವೇ ಕೊನೆಗೊಳ್ಳುವ ಸಾಧ್ಯತೆಯಿದೆ. ಸರಕಾರವು 150 ವರ್ಷ ಹಳೆಯ ಕ್ರೈಸ್ತ ವಿವಾಹ ಕಾಯ್ದೆಗೆ ತಿದ್ದುಪಡಿ ತಂದು ಕಾಯುವಿಕೆಯ ಅವಧಿಯನ್ನು ಒಂದು ವರ್ಷಕ್ಕೆ ಇಳಿಸುವ ಚಿಂತನೆಯಲ್ಲಿದೆ. ಈ ಕುರಿತು ಕ್ರೈಸ್ತ ಸಮುದಾಯ ಸತತವಾಗಿ ಬೇಡಿಕೆಯಿರಿಸಿತ್ತು.
ಸರಕಾರವು ವಿಚ್ಛೇದನ (ತಿದ್ದುಪಡಿ) ಮಸೂದೆ-2016ನ್ನು ನ.16ರಂದು ಆರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೈಗೆತ್ತಿಕೊಳ್ಳುವ ನಿರೀಕ್ಷೆಯಿರುವ ‘ಸರಕಾರಿ ಕಾನೂನು ಹಾಗೂ ಆರ್ಥಿಕ ವ್ಯವಹಾರಗಳ ಸಂಭಾವ್ಯ ಪಟ್ಟಿಯಲ್ಲಿ’ ಇರಿಸಿದೆ.
ಆದಾಗ್ಯೂ, ಕ್ರೈಸ್ತರ ವಿವಾಹಕ್ಕೆ ಸಂಬಂಧಿಸಿದ ಪ್ರಸ್ತಾವಗಳ ತಿದ್ದುಪಡಿಗೆ ಕೇಂದ್ರ ಸಂಪುಟವು ಇನ್ನಷ್ಟೇ ಅನುಮೋದನೆ ನೀಡಬೇಕಿದೆ.
ಕಾನೂನು ಸಚಿವಾಲಯದ ಪ್ರಸ್ತಾವದ ಪ್ರಕಾರ, ಕ್ರೈಸ್ತ ದಂಪತಿಯ ಪ್ರತ್ಯೇಕಗೊಳ್ಳುವ ಅವಧಿಯನ್ನು ಈಗಿರುವ 2 ವರ್ಷಗಳಿಂದ ಒಮದು ವರ್ಷಕ್ಕೆ ಇಳಿಸಲಾಗುವುದು. ಆ ಬಳಿಕ ಅವರು ಪರಸ್ಪರ ಸಮ್ಮತಿಯ ವಿಚ್ಛೇದನಕ್ಕೆ ಅರ್ಜಿ ದಾಖಲಿಸಬಹುದು. ಇದರಿಂದಾಗಿ ಇತರ ಸಮುದಾಯಗಳಿಗಿರುವ ಕಾನೂನಿನಂತೆಯೇ ಕ್ರೈಸ್ತರ ವಿಚ್ಛೇದನ ಕಾನೂನು ಮಾರ್ಪಾಟಾಗಲಿದೆ.
ಹಿಂದೂ, ಪಾರ್ಸಿ ವಿವಾಹ ಮತ್ತು ವಿಚ್ಛೇದನ ಕಾಯ್ದೆಗಳಲ್ಲಿ ಹಾಗೂ ವಿಶೇಷ ವಿವಾಹ ಕಾಯ್ದೆಗಳಲ್ಲಿ ಪ್ರತ್ಯೇಕವಾಗಿರಬೇಕಾದ ಅವಧಿ ಒಂದು ವರ್ಷವಾಗಿದೆ.
ವಿಚ್ಛೇದನ ಕೋರುವ ಕ್ರೈಸ್ತ ದಂಪತಿ 2 ಅಥವಾ ಹೆಚ್ಚು ವರ್ಷ ಪ್ರತ್ಯೇಕವಾಗಿ ವಾಸಿಸುತ್ತಿರಬೇಕೆಂದು 2001ರಲ್ಲಿ ತಿದ್ದುಪಡಿಯೊಂದರ ಮೂಲಕ ವಿಚ್ಛೇದನ ಕಾಯ್ದೆಗೆ ಸೇರಿಸಲಾಗಿದ್ದ ಸೆ.10ಎ(1) ಹೇಳುತ್ತಿದೆ.
ಇತರರಿಗಿಲ್ಲದ ಕಾಯುವಿಕೆ ಅವಧಿ ಕ್ರೈಸ್ತರಿಗೆ ಮಾತ್ರ ಯಾಕೆ? ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್, ಕಾಯ್ದೆಗೆ ಸೂಕ್ತ ತಿದ್ದುಪಡಿ ತರುವಂತೆ ಎಪ್ರಿಲ್‌ನಲ್ಲಿ ಸರಕಾರಕ್ಕೆ ಆದೇಶ ನೀಡಿತ್ತು ಹಾಗೂ ಕ್ರೈಸ್ತ ಸಮುದಾಯದವರೂ ಈ ಬಗ್ಗೆ ಸತತ ಒತ್ತಾಯಿಸುತ್ತಲೇ ಬಂದಿದ್ದರು.







