ವರ್ಮಾ ನ್ಯೂಕ್ಲಿಯರ್ ಬಾಂಬ್

ಕಟುವಾಸ್ತವದ ಕಥೆ ಹೇಳುವ ಚಿತ್ರಗಳ ಬಗ್ಗೆ ಯೋಚಿಸಿದಾಗ ನಮಗೆ ಮೊದಲು ನೆನಪಾಗುವುದು ರಾಮ್‌ಗೋಪಾಲ್ ವರ್ಮಾ. ಸತ್ಯ, ಕಂಪೆನಿ, ಸರ್ಕಾರ್‌ನಂತಹ ರಿಯಾಲಿಟಿ ಚಿತ್ರಗಳನ್ನು ನೀಡಿರುವ ರಾಮ್‌ಗೋಪಾಲ್ ವರ್ಮಾ ಇತ್ತೀಚಿನ ದಿನಗಳಲ್ಲಿ ಮಾತ್ರ ಸಿನೆಮಾಗಳಿಗಿಂತ ಹೆಚ್ಚಾಗಿ ತನ್ನ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿ ಮಾಡುತ್ತಿದ್ದಾರೆ. ಆದರೆ ಈಗ ಅವರು ಹೊಸ ಬಾಂಬೊಂದನ್ನು ಸಿಡಿಸಿದ್ದಾರೆ. ತಾನೊಂದು ಭಾರೀ ವೆಚ್ಚದ ಅಂತಾರಾಷ್ಟ್ರೀಯ ಮಟ್ಟದ ಸಿನೆಮಾವೊಂದನ್ನು ನಿರ್ಮಿಸುವುದಾಗಿ ಅವರು ಘೋಷಿಸಿದ್ದಾರೆ. ‘ನ್ಯೂಕ್ಲಿಯರ್’ ಎಂಬ ಹೆಸರಿನ ಈ ಚಿತ್ರವು ಬರೋಬ್ಬರಿ 340 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆಯೆಂದು ಅವರು ಟ್ವೀಟ್ ಮಾಡಿದ್ದಾರೆ. ಭಾರತ ಹಾಗೂ ಅಮೆರಿಕ, ಚೀನಾ, ರಶ್ಯ, ಯೆಮೆನ್‌ನಲ್ಲಿ ನ್ಯೂಕ್ಲಿಯರ್ ಚಿತ್ರೀಕರಣಗೊಳ್ಳಲಿದ್ದು, ಅದರಲ್ಲಿ ಅಮೆರಿಕ, ಚೀನಾ, ರಶ್ಯ ಹಾಗೂ ಭಾರತದ ಖ್ಯಾತ ನಟ, ನಟಿಯರು ಅಭಿನಯಿಸಲಿ ದ್ದಾರೆಂದು ವರ್ಮಾ ತಿಳಿಸಿದ್ದಾರೆ.
ವರ್ಮಾ ಅವರ ಬಹುತೇಕ ಚಿತ್ರಗಳು ನೈಜಘಟನೆಗಳಿಂದ ಪ್ರೇರಿತವಾಗಿರುತ್ತವೆ. ರಾಜಕೀಯ, ಅಂಡರ್‌ವರ್ಲ್ಡ್‌ಗೆ ಸಂಬಂಧಿಸಿದ ಕಥೆಗಳ ಬಗ್ಗೆ ಹೆಚ್ಚು ಗಮನಹರಿಸುವ ಅವರು, ನ್ಯೂಕ್ಲಿಯರ್‌ನಲ್ಲಿ ಜಾಗತಿಕ ಭಯೋತ್ಪಾದನೆಗೆ ಸಂಬಂಧಿಸಿ ಕಥೆಯನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರವು ಭಾರತದಲ್ಲಿ ಈವರೆಗೆ ನಿರ್ಮಾಣಗೊಂಡ ಚಿತ್ರಗಳಲ್ಲೇ ಅತ್ಯಂತ ದುಬಾರಿ ವೆಚ್ಚದ್ದಾಗಿದೆಯೆಂದು ಆರ್‌ಜಿವಿ ಟ್ವೀಟ್ ಮಾಡಿದ್ದಾರೆ.
ಅಮಿತಾಭ್ ಮುಖ್ಯಪಾತ್ರದಲ್ಲಿ ರುವ ಸರ್ಕಾರ್ 3 ಚಿತ್ರದ ಶೂಟಿಂಗ್ ಪೂರ್ತಿಗೊಳಿಸಿದ ಬಳಿಕ ನ್ಯೂಕ್ಲಿಯರ್ ಚಿತ್ರದ ಕೆಲಸವನ್ನು ಆರಂಭಿಸುವುದಾಗಿ ವರ್ಮಾ ತಿಳಿಸಿದ್ದಾರೆ.







