ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಮಕ್ಕಳ ದಿನಾಚರಣೆ
.jpg)
ಮೂಡುಬಿದಿರೆ, ನ.13: ಹೆತ್ತವರು ತಮ್ಮ ಮನೆಯ ಮಕ್ಕಳು ತುಂಟಾಟ ಅಥವಾ ಕೀಟಲೆ ಮಾಡಿದರೆ ಅದನ್ನು ನಿಲ್ಲಿಸಲು ನಿನ್ನನ್ನು ಪೊಲೀಸ್‌ಗೆ ಕೊಡ್ತೇನೆ ಎಂದು ಹೇಳುವ ಮೂಲಕ ಪೊಲೀಸರೆಂದರೆ ಯ ಉಂಟು ಮಾಡುವುದರಿಂದ ಖಾಕಿ ಬಟ್ಟೆಗಳನ್ನು ನೋಡಿದಾಗ ಮಕ್ಕಳು ಹೆದರುತ್ತಾರೆ ಆದ್ದರಿಂದ ಪೋಷಕರು ಮಕ್ಕಳಲ್ಲಿ ಪೊಲೀಸರ ಬಗ್ಗೆ ಹೆದರಿಕೆಯನ್ನು ಉಂಟು ಮಾಡಬೇಡಿ ಎಂದು ಮೂಡುಬಿದಿರೆಯ ಪೊಲೀಸ್ ಉಪ ನಿರೀಕ್ಷಕ ದೇಜಪ್ಪ ಸಲಹೆ ನೀಡಿದ್ದಾರೆ.
ಅವರು ಮೂಡುಬಿದಿರೆಯ ಐಸಿವೈಎಂ ವತಿಯಿಂದ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಸಂದರ್ಭ ಅವರು ಮಾತನಾಡಿದರು.
ಮಹಿಳೆಯರು ಮತ್ತು ಮಕ್ಕಳನ್ನು ಠಾಣೆಗೆ ಕರೆಯುವುದಿಲ್ಲ. ಪುರುಷರನ್ನು ಮಾತ್ರ ಕರೆಂುುತ್ತೇವೆ. ಮಕ್ಕಳ ಪ್ರಕರಣಗಳನ್ನು ಆದಷ್ಟು ನಾಜೂಕಾಗಿ ನಿರ್ವಹಿಸಲು ಎಎಸೈ ಮತ್ತು ಮಹಿಳಾ ಪೊಲೀಸ್ ಸಿಬಂದಿ ಇದ್ದಾರೆ ಎಂಬಿತ್ಯಾದಿ ವಿವರಗಳನ್ನು ನೀಡಿದರು. ವಿಜಯ ದಶಮಿಯಂದು ನಾವೂ ಆಯುಧ ಪೂಜೆ ಮಾಡುತ್ತೇವೆ. ಯಾರ ಮೇಲೂ ಈ ಆಯುಧಗಳ ಪ್ರಯೋಗವಾಗದಿರುವಂಥ ವಾತಾವರಣ ನಿರ್ಮಾಣವಾಗಲಿ ಎಂದು ಪ್ರಾರ್ಥಿಸುತ್ತೇವೆ ಎಂದರು.
ಪೊಲೀಸ್ ಠಾಣೆಯಲ್ಲಿರುವ ಸ್ವಾಗತಕಾರರು, ಪ್ರಕರಣಗಳನ್ನು ದಾಖಲಿಸುವವರು, ಕಂಪ್ಯೂಟರ್ ವಿಭಾಗ ಸೇರಿದಂತೆ ಹಲವು ವಿಭಾಗಗಳಲ್ಲಿ ಪೊಲೀಸ್ ಠಾಣೆಯ ಕಾರ್ಯವಿಧಾನಗಳು ನಡೆಯುತ್ತವೆ? ವಿವಿಧ ಶ್ರೇಣಿಗಳ ಅಧಿಕಾರಿಗಳ ಕರ್ತವ್ಯಗಳೇನು? ಕಾನೂನು ಭಂಗದ ಪ್ರಕರಣಗಳ ನಿಭಾವಣೆ, ಗುರುತರ ಅಪರಾಧಗಳ ವ್ಯತ್ಯಾಸ, ಸೀಟಿ, ಲಾಠಿ, ಪಿಸ್ತೂಲುಬಂದೂಕು ಹೀಗೆ ಬಹುವಿಧ ಆಯುಧಗಳ ಪ್ರಯೋಗ, ಪ್ರಕರಣಗಳ ದಾಖಲೀಕರಣ, ಸಾಕ್ಷಿ ಸಂಗ್ರಹ, ಮೊದಲಾದ ವಿಚಾರಗಳ ಬಗ್ಗೆ ಮಕ್ಕಳಿಗೆ ಪೊಲೀಸ್ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್ ವಿವರಿಸಿದರು.
ಮಕ್ಕಳ ಪರವಾಗಿ ಮಾತನಾಡಿದ ನಿಯೊಲ್ಲಾ ರೇಂಜರ್, ಮಕ್ಕಳ ಮೇಲೆ ದೌರ್ಜನ್ಯ, ಬಲಾತ್ಕಾರ, ಕ್ರೌರ್ಯ ನಡೆಯುತ್ತ ಇದೆ. ಇದಕ್ಕೆಲ್ಲ ರಕ್ಷಣೆ ಹೇಗೆ? ಇದಕ್ಕೆ ಕೇವಲ ಪೊಲೀಸರೊಂದಿಗೆ ನಾಗರಿಕರ ಜವಾಬ್ದಾರಿಯೂ ಇದೆ. ನಮ್ಮ ರಾಜ್ಯದಲ್ಲಿರುವ 7 ಕೋಟಿ ಜನರನ್ನು ರಕ್ಷಣೆ ಮಾಡುವ ಸಲುವಾಗಿ ಸರಕಾರ 80,000 ಮಂದಿ ಪೊಲೀಸರನ್ನು ನೇಮಿಸಿದೆ. ನೀವು ನಮ್ಮನ್ನು ರಕ್ಷಿಸಬೇಕು. ದಯವಿಟ್ಟು ಅಪರಾಧ ಜಗತ್ತನ್ನು ಮಟ್ಟ ಹಾಕಿ ಎಂದು ವಿನಂತಿಸಿದರು.
ಎಲ್ಲ ಮಕ್ಕಳೂ ಪೊಲೀಸ್ ಸಿಬ್ಬಂದಿಗೆ ಸ್ವಪರಿಚಯದೊಂದಿಗೆ ಹೂವನ್ನು ನೀಡಿ ತಮ್ಮ ಗೌರವ ಸಲ್ಲಿಸಿದರು. ಐಸಿವೈಎಂನ ಪ್ರಮುಖರಾದ ರಾಹುಲ್ ಕೊರೆಯ, ಕೆವಿನ್, ಸಚೇತಕ ಗ್ರೇಷನ್ ರೋಡ್ರಿಗಸ್ ಸಹಿತ ಸದಸ್ಯರು, ಚರ್ಚ್‌ಗಳ ಭಗಿನಿಯರು, ಪೋಷಕರು ಉಪಸ್ಥಿತರಿದ್ದರು. ರಾಹುಲ್ ಕೊರೆಯ ನಿರೂಪಿಸಿದರು.







