ಫೋರ್ಸ್ ಗೆ ಸೆನ್ಸಾರ್ ಕಿರಿಕ್

ಜಾನ್ ಅಬ್ರಹಾಂ ನಟಿಸಿದ್ದ ಬ್ಲಾಕ್‌ಬಸ್ಟರ್ ಚಿತ್ರ ‘ಫೋರ್ಸ್’ ನ ಮುಂದುವರಿದ ಭಾಗ ಬೆಳ್ಳಿತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಆದರೆ ಅದಕ್ಕೆ ಸೆನ್ಸಾರ್ ವಿಘ್ನ ಎದುರಾಗಿದೆ. ಹೌದು, ಫೋರ್ಸ್ 2’ನ ಮೂರು ಪ್ರಮುಖ ದೃಶ್ಯಗಳಿಗೆ ಕತ್ತರಿಪ್ರಯೋಗ ಮಾಡುವಂತೆ ಸೆನ್ಸಾರ್ ಮಂಡಳಿ, ನಿರ್ದೇಶಕ ಅಭಿನಯ್ ದೇವ್‌ಗೆ ಸೂಚಿಸಿದೆ. ಗಡಿಯಾಚೆಗಿನ ಭಯೋತ್ಪಾದನೆ ಹಾಗೂ ಭಾರತ-ಪಾಕ್ ಬಾಂಧವ್ಯಕ್ಕೆ ಸಂಬಂಧಿಸಿದ ಕಥಾವಸ್ತುವನ್ನು ಈ ಚಿತ್ರ ಒಳಗೊಂಡಿದೆ. ಸೆನ್ಸಾರ್ ಮಂಡಳಿಯಿಂದ ಕತ್ತರಿಪ್ರಯೋಗಕ್ಕೊಳಗಾದ ಈ ಮೂರು ದೃಶ್ಯಗಳು ಅತ್ಯಂತ ವಿವಾದಾತ್ಮಕವಾಗಿದ್ದು, ಪ್ರಸಕ್ತ ರಾಜಕೀಯ ವಿದ್ಯಮಾನಗಳಿಗೆ ಸಂಬಂಧಿಸಿದ್ದಾಗಿದೆಯೆನ್ನಲಾಗಿದೆ.
ಆದರೆ ಈ ದೃಶ್ಯಗಳನ್ನು ಕತ್ತರಿಸಲು ನಿರ್ದೇಶಕರಿಗೆ ಮನಸ್ಸಿಲ್ಲ. ಈ ಮೂರು ದೃಶ್ಯಗಳನ್ನು ತೆಗೆದುಹಾಕುವುದರಿಂದ ಚಿತ್ರದ ಓಟಕ್ಕೆ ಧಕ್ಕೆಯಾಗುವುದೆಂದು ಅವರ ವಾದ. ಇದಕ್ಕಾಗಿ ಅವರು ಸೆನ್ಸಾರ್ ಪರಾಮರ್ಶನಾ ಸಮಿತಿಯ ಮೊರೆಹೋಗಲು ನಿರ್ಧರಿಸಿದ್ದಾರೆ. ಜಾನ್ ಅಬ್ರಹಾಂ, ಸೋನಾಕ್ಷಿ ಸಿನ್ಹಾ ಹಾಗೂ ತಾಹಿರ್ ರಾಜ್ ಭಾಸಿನ್ ನಟಿಸಿರುವ ಫೋರ್ಸ್ 2 ನವೆಂಬರ್ 18ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.





