ಕೋಲ್ಕತಾ: ಕಸದ ತೊಟ್ಟಿಯಲ್ಲಿ ಎರಡು ಚೀಲಗಳ ತುಂಬ ಹರಿದ 500,1,000 ರೂ. ನೋಟುಗಳು ಪತ್ತೆ

ಕೋಲ್ಕತಾ,ನ.13: ಕೋಲ್ಕತಾದ ಐಷಾರಾಮಿ ಪ್ರದೇಶ ಗಾಲ್ಫ್ ಕ್ಲಬ್ ರಸ್ತೆಯಲ್ಲಿ ಇಂದು ಬೆಳಗಿನ ಜಾವ ರಸ್ತೆಬದಿಯ ಕಸದ ತೊಟ್ಟಿಯಲ್ಲಿ ಹರಿದ 500 ಮತ್ತು 1,000 ರೂ.ಗಳ ಹಳೆಯ ನೋಟುಗಳು ತುಂಬಿದ್ದ ಕನಿಷ್ಠ ಎರಡು ಚೀಲಗಳು ಪತ್ತೆಯಾಗಿವೆ.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಈ ನೋಟುಗಳನ್ನು ವಶ ಪಡಿಸಿಕೊಂಡಿದ್ದು, ಅವು ಸಾಚಾ ನೋಟುಗಳೋ ಖೋಟಾ ನೋಟುಗಳೋ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಈ ನೋಟುಗಳು ಅಸಲಿಯೆಂಬಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಶನಿವಾರ ರಾತ್ರಿ ಇಲ್ಲಿ ಎಸೆದಿರಬಹುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು. ನೋಟುಗಳನ್ನು ಎಸೆದಿರುವ ವ್ಯಕ್ತಿಯನ್ನು ಪತ್ತೆ ಹಚ್ಚುವ ಪ್ರಯತ್ನವಾಗಿ ಸ್ಥಳೀಯ ನಿವಾಸಿಗಳನ್ನು ಪೊಲೀಸರು ಪ್ರಶ್ನಿಸುತ್ತಿದ್ದಾರೆ.
ಪ್ರಧಾನಿ ಮೋದಿ ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ. ಕಪ್ಪುಹಣ ಹೊಂದಿರುವವರು ಅವುಗಳನ್ನು ಹರಿದೆಸೆಯುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಯೋರ್ವ ಹೇಳಿದರೆ, ನೋಟುಗಳನ್ನು ಎಸೆದವರು ಅವುಗಳನ್ನು ಹರಿಯಬಾರದಿತ್ತು. ಕೆಲವು ಬಡವರಿಗಾದರೂ ಉಪಯೋಗವಾಗುತ್ತಿತ್ತು ಎಂದು ಇನ್ನೋರ್ವ ಹೇಳಿದ.





