ಪುತ್ತೂರು: ‘ಮನೋ ಸಾಮರ್ಥ್ಯ ಮತ್ತು ಕೌಶಲ್ಯಗಳು’ ತರಬೇತಿ ಕಾರ್ಯಾಗಾರ

ಪುತ್ತೂರು, ನ.13: ಪ್ರಸ್ತುತ ಸರಕಾರಿ ಶಾಲೆಗಳಲ್ಲಿ ಅಗತ್ಯವಿರುವ ಎಲ್ಲಾ ಮೂಲಭೂತ ಸೌಲಭ್ಯಗಳು ಲಭ್ಯವಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಟಿಯಾಗಿದೆ ಎಂದು ಪುತ್ತೂರಿನ ಕಿಡ್ಸ್ ಸಂಸ್ಥೆಯ ಕಾರ್ಯಕ್ರಮ ಯೋಜನಾಧಿಕಾರಿ ರವಿಚಂದ್ರ ಚಾರ್ಮಾಡಿ ಹೇಳಿದರು.
ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ, ಕಿಡ್ಸ್ ಸಂಸ್ಥೆ, ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾಯಿ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ’ಮನೋ ಸಾಮರ್ಥ್ಯ ಮತ್ತು ಕೌಶಲ್ಯಗಳು’ ಕುರಿತು ಆಯೋಜಿಸಲಾದ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ವ್ಯಕ್ತಿತ್ವ ನಿರ್ಮಾಣದ ಉದ್ದೇಶದಿಂದ ಪಠ್ಯ ಚಟುವಟಿಕೆಗಳ ಜೊತೆಗೆ ನಾನಾ ರೀತಿಯ ಪಠ್ಯೇತರ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡಾಗ ಮುಂದಿನ ಬದುಕು ಉಜ್ವಲವಾಗುವುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೆಮ್ಮಾಯಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಜಿನ್ನಪ್ಪಗೌಡ ಮಾತನಾಡಿ, ವಿದ್ಯಾರ್ಥಿಗಳು ಅಂಕ ಗಳಿಕೆಯೊಂದಿಗೆ ತಮ್ಮ ಕೌಶಲ್ಯ ಮತ್ತು ಮನೋ ಸಾಮರ್ಥ್ಯವನ್ನು ಹೆಚ್ಚಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳು ಬಹಳಷ್ಟು ಪ್ರಯೋಜನಕಾರಿಯಾಗಿ ಪರಿಣಮಿಸಲಿವೆ ಎಂದು ಶುಭ ಹಾರೈಸಿದರು.
ಶಾಲಾ ಮುಖ್ಯ ಗುರು ವಿಜಯ ಕುಮಾರಿ ಮತ್ತು ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ ಸಂಯೋಜಕ ಪ್ರಸನ್ನಕುಮಾರ್ ಸಂದರ್ಭೋಚಿತವಾಗಿ ಮಾತನಾಡಿದರು.
ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಭೌತಶಾಸ್ತ್ರ ಉಪನ್ಯಾಸಕ ವಿಪಿನ್ ನಾಯ್ಕಾ ಮತ್ತು ವಾಣಿಜ್ಯಶಾಸ್ತ್ರ ಉಪನ್ಯಾಸಕ ತೇಜಸ್ವೀ ಭಟ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಚಟುವಟಿಕೆಗಳ ಮೂಲಕ ತರಬೇತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಸಮಾಜಕಾರ್ಯ ವಿದ್ಯಾರ್ಥಿಗಳಾದ ಸೋನಲ್ ಲೋಬೊ ಸ್ವಾಗತಿಸಿ, ಸುಷ್ಮಾ ವಂದಿಸಿದರು. ಶ್ರೀಮಾ ಮತ್ತು ಪುಣ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.







