ಉಡುಪಿ ಜಿಲ್ಲಾಧಿಕಾರಿಗಳನ್ನು ಬದಲಿಸಲು ನಂದಿಕೂರು ಜನಜಾಗೃತಿ ಸಮಿತಿ ಅಧ್ಯಕ್ಷರ ಮನವಿ
ಉಡುಪಿ, ನ.13: ಎಲ್ಲೂರು ಕೇಂದ್ರಿತವಾಗಿ ಕಾರ್ಯಾಚರಿಸುತ್ತಿರುವ ಯುಪಿಸಿಎಲ್ ಕಲ್ಲಿದ್ದಲು ಆಧಾರಿತ ಉಷ್ಣವಿದ್ಯುತ್ ಸ್ಥಾವರದ ವಿಸ್ತರಣೆಗಾಗಿ ನ.10ರಂದು ಕೆಂಜೂರು ಶಾಲಾ ಮೈದಾನದಲ್ಲಿ ನಡೆದ ಪರಿಸರ ಸಾರ್ವಜನಿಕ ಸಭೆ, ಉಡುಪಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರ ಉಪಸ್ಥಿತಿಯಲ್ಲಿ ಅದಾನಿ ಕಂಪೆನಿ ಪೂರ್ವನಿರ್ಧರಿಸಿದ ರೀತಿಯಲ್ಲಿ ನಡೆದಿದ್ದು, ಸಂತ್ರಸ್ಥ ಜನರ ಸಂಕಷ್ಟ ಗಳನ್ನು ಆಲಿಸದೇ ಅನ್ಯಾಯವೆಸಗಲಾಗಿದೆ ಎಂದು ಯೋಜನೆ ವಿರುದ್ಧ ಹೋರಾಟ ನಡೆಸುತ್ತಿರುವ ನಂದಿಕೂರು ಜನಜಾಗೃತಿ ಸಮಿತಿ ಅಧ್ಯಕ್ಷ ಹಾಗೂ ಯೋಜನೆಯ ಸಂತ್ರಸ್ಥರಾಗಿರುವ ಬಾಲಕೃಷ್ಣ ಶೆಟ್ಟಿ ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಯುಪಿಸಿಎಲ್ ವಿಸ್ತರಣೆಯಿಂದ ಭೂಮಿ ಕಳೆದುಕೊಂಡು ಸಂತ್ರಸ್ಥರಾಗುವ ಜನರ ವಿಶ್ವಾಸವನ್ನು ಕಳೆದು ಕೊಂಡಿದ್ದು, ಅವರನ್ನು ಕೂಡಲೇ ವಾಪಸು ಕರೆಸಿಕೊಂಡು ಅವರ ಸ್ಥಾನಕ್ಕೆ ಬೇರೆಯವರನ್ನು ನೇಮಿಸುವಂತೆ ಅವರು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಇಂದು ಪತ್ರ ಬರೆದು ಒತ್ತಾಯಿಸಿದ್ದಾರೆ.
ಇಡೀ ಜಿಲ್ಲೆಯಲ್ಲಿ 144 ಸೆಕ್ಷನ್‌ನಡಿ ನಿಷೇಧಾಜ್ಞೆ ಇರುವಾಗಲೇ ಈ ಸಂತ್ರಸ್ತ ಜನರ ಅಹವಾಲು ಆಲಿಕೆ ಸಭೆಯನ್ನು ನಡೆಸಲಾಗಿದೆ. ಆದುದರಿಂದ ಈ ಸಭೆಯೇ ಅಕ್ರಮವಾಗಿದೆ. ಈ ಕುರಿತು ಕಾಪು ಶಾಸಕ ವಿನಯಕುಮಾರ್ ಸೊರಕೆ ಅವರು ಜಿಲ್ಲಾಧಿಕಾರಿಗಳ ಗಮನ ಸೆಳೆದು ಸಭೆಯನ್ನು ಮುಂದೂಡುವಂತೆ ಕೇಳಿಕೊಂಡರೂ ಆಶ್ಚರ್ಯವೆಂಬಂತೆ ಜಿಲ್ಲಾಧಿಕಾರಿಗಳು ಈ ಮನವಿಯನ್ನು ತಳ್ಳಿಹಾಕಿದ್ದರು ಎಂದು ಬಾಲಕೃಷ್ಣ ಶೆಟ್ಟಿ ಪತ್ರದಲ್ಲಿ ವಿವರಿಸಿದ್ದಾರೆ.
ಈ ಸಭೆಗಾಗಿಯೇ ಯುಪಿಸಿಎಲ್ ಕಂಪೆನಿ ಮಂಗಳೂರು ಹಾಗೂ ದೂರದ ಇತರ ಕಡೆಗಳಿಂದ ಬಾಡಿಗೆ ಜನರನ್ನು ಹಾಗೂ ಗೂಂಡಾಗಳನ್ನು ಬಸ್ಸುಗಳಲ್ಲಿ ಕರೆದುಕೊಂಡು ಬಂದಿತ್ತು. ಇದರಿಂದ ಯೋಜನೆಯಿಂದ ಸಂತ್ರಸ್ತರಾಗುವವರು ಹಾಗೂ ಈಗಾಗಲೇ ಸಂತ್ರಸ್ಥರಾಗಿ ನಾನಾ ತೊಂದರೆಗಳಿಂದ ಬಳಲುತ್ತಿರು ವವರಿಗೆ ಸಭೆಯ ಸಮೀಪ ಬರಲು ಅವಕಾಶ ಸಿಗಲಿಲ್ಲ.
ಯೋಜನೆಯಿಂದ ಪ್ರದೇಶದ ಪರಿಸರದ ಮೇಲಾಗುವ ಪರಿಣಾಮಗಳ ಕುರಿತು ನೇರಿ ತಯಾರಿಸಿದ ವರದಿಯನ್ನು ಅಂದಿನ ಸಭೆಯಲ್ಲಿ ಮಂಡಿಸಲಾಗಿಲ್ಲ. ಕಂಪೆನಿಯ ಬಾಡಿಗೆ ಜನರು ಸಭೆಯಲ್ಲಿ ಮಾತನಾಡಲು ಹೆಚ್ಚಿನ ಅವಕಾಶ ಪಡೆದು ಸಿಎಸ್‌ಆರ್ ನಿಧಿಗಾಗಿ ಯುಪಿಸಿಎಲ್ ಕಂಪೆನಿ, ಹಾಗೂ ಅದಾನಿ ಕಂಪೆನಿಯನ್ನು ಹೊಗಳಲು ಅವಕಾಶವನ್ನು ದುರುಪಯೋಗ ಪಡಿಸಿಕೊಂಡರು. ಅಲ್ಲಿ ಯೋಜನೆಯ, ಅದರ ವಿಸ್ತರಣೆಯ ಸಾಧಕ-ಬಾಧಕಗಳ ಕುರಿತು ಯಾವುದೇ ಚರ್ಚೆ ನಡೆಯಲೂ ಇಲ್ಲ ಹಾಗೂ ಅದನ್ನು ಪ್ರಸ್ತಾಪಿಸಲೂ ಹೋಗಲಿಲ್ಲ ಎಂದವರು ದೂರಿದರು.
ಅಂದು ಯೋಜನೆಯ ವಿರುದ್ಧ ದಾಖಲೆಗಳ ಸಹಿತ ಮಾತನಾಡಲು ಮುಂದಾದ ಮೂರ್ನಾಲ್ಕು ಮಂದಿಗೆ ಕಂಪೆನಿಯ ಬಾಡಿಗೆ ಗೂಂಡಾಗಳು ಮಾತನಾಡಲು ಅವಕಾಶವನ್ನು ನೀಡಲಿಲ್ಲ. ಆಶ್ಚರ್ಯದ ಸಂಗತಿ ಎಂದರೆ ಜಿಲ್ಲಾಧಿಕಾರಿಗಳೂ ಇವರೊಂದಿಗೆ ಸೇರಿ ಇವರು ಮಾತನಾಡಲು ವಿರೋಧ ಸೂಚಿಸಿದರು. ಈ ಮೂಲಕ ಜಿಲ್ಲಾಧಿಕಾರಿಗಳು ಈ ಯೋಜನೆಯಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರ್ಪಡಿಸಿದರು. ಈ ಬಗ್ಗೆ ತನ್ನ ಬಳಿ ಸ್ಪಷ್ಟ ವಿಡಿಯೋ ಪುರಾವೆ ಇದೆ ಎಂದು ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.
ಈ ಎಲ್ಲಾ ಕಾರಣಗಳಿಗಾಗಿ ಜನತೆಯನ್ನು ವಿಶ್ವಾಸವನ್ನೇ ಕಳೆದುಕೊಂಡಿರುವ ಹಾಗೂ ತನ್ನ ಸ್ಥಾನದಲ್ಲಿ ಮುಂದುವರಿಯಲು ಅಸಮರ್ಥರಾದ ಉಡುಪಿಯ ಈಗಿನ ಜಿಲ್ಲಾಧಿಕಾರಿಗಳನ್ನು ತಕ್ಷಣವೇ ಬದಲಿಸಿ, ಅವರ ಸ್ಥಾನಕ್ಕೆ ಜವಾಬ್ದಾರಿ ಯುತ, ಪ್ರಾಮಾಣಿಕ ಹಾಗೂ ಬದ್ಧತೆಯುಳ್ಳ ಜಿಲ್ಲಾಧಿಕಾರಿಯೊಬ್ಬರನ್ನು ನೇಮಿಸುವಂತೆ ಬಾಲಕೃಷ್ಣ ಶೆಟ್ಟಿ ಅವರು ಮುಖ್ಯ ಕಾರ್ಯದರ್ಶಿಗಳಲ್ಲಿ ಮನವಿ ಮಾಡಿದ್ದಾರೆ.







