ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

ಬಂಟ್ವಾಳ, ನ.13: ಕನ್ಯಾನ ಪಿಲಿಂಗುಳಿಯ ಯುವತಿ ನಾಪತ್ತೆಯಾಗಿ ಅದೇ ಗ್ರಾಮದ ಶಿರಂಕಲ್ಲು ನಿವಾಸಿ ಸಮೀರ್ ಜೊತೆ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆತನ ತಂದೆ ಅಬೂಬಕರ್(58) ಎಂಬವರ ಮೇಲೆ ರವಿವಾರ ರಾತ್ರಿ ತಂಡವೊಂದು ಹಲ್ಲೆ ನಡೆಸಿದೆ.
ಅಬೂಬಕರ್ ಅವರು ಅಂಗಡಿಯಲ್ಲಿದ್ದ ವೇಳೆ ಧಾವಿಸಿ ಬಂದ ಆರೋಪಿಗಳು ಈ ಕೃತ್ಯವೆಸಗಿದ್ದಾರೆ. ಗಾಯಗೊಂಡಿರುವ ಅಬೂಬಕ್ಕರ್ ಅವರು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕನ್ಯಾನದ ಚಂದ್ರಹಾಸ ಮತ್ತು ದಿನೇಶ ಅವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಅವರು ದೂರು ನೀಡಿದ್ದಾರೆ.
ಅಬೂಬಕರ್ ಅವರ ಅಂಗಡಿಗೆ ಬೈಕಿನಲ್ಲಿ ಆಗಮಿಸಿದ ಚಂದ್ರಹಾಸ ಮತ್ತು ದಿನೇಶ ಅವರು ಸಾಮಗ್ರಿಗಳನ್ನು ಖರೀದಿಸುವ ನೆಪದಲ್ಲಿ ಮಾತನಾಡಿಸಿ ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ತತ್‌ಕ್ಷಣ ಅಲ್ಲಿ ಜನಜಮಾಯಿಸಿದ್ದು ಹಲ್ಲೆ ಮಾಡಿದವರು ಪರಾರಿಯಾಗಿದ್ದಾರೆ. ಈ ಸಂದರ್ಭ ಕನ್ಯಾನ ಪೇಟೆಯಲ್ಲಿಯೂ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಬಹುದೆಂದು ಊಹಿಸಿದ ಪೊಲೀಸರು ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿಸಿದರು.
ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.







