ಮಮತಾ ಕರೆಗೆ ಸ್ಪಂದಿಸದ ಸಿಪಿಎಂ

ಕೋಲ್ಕತ್ತಾ, ನ.13: ಅಧಿಕ ವೌಲ್ಯದ ಕರೆನ್ಸಿ ನೋಟುಗನ್ನು ಅಮಾನ್ಯಗೊಳಿಸಿದ ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸಿ, ಇದರ ವಿರುದ್ಧ ಹೋರಾಡಲು ಸಿಪಿಎಂ ಸೇರಿದಂತೆ ಪ್ರತಿಪಕ್ಷಗಳ ಜೊತೆ ಕೈಜೋಡಿಸಲು ಸಿದ್ದ ಎಂದು ಹೇಳಿಕೆ ನೀಡಿದ ಮರುದಿನ, ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿಯವರಿಗೆ ದೂರವಾಣಿ ಕರೆ ಮಾಡಿ, ಬಿಜೆಪಿ ಮತ್ತು ಅದರ ಜನವಿರೋಧಿ ನೀತಿಗಳ ವಿರುದ್ಧ ಸಂಘಟಿತ ಹೋರಾಟಕ್ಕೆ ಒತ್ತಾಯಿಸಿದ್ದಾರೆ.
ಆದರೆ ಮಮತಾರಿಗೆ ತೀವ್ರ ಮುಖಭಂಗ ಆಗುವ ರೀತಿಯಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಪಿಐ(ಎಂ) ಮುಖಂಡರು, ಇದೊಂದು ಹತಾಶೆಯ ಕರೆಯಾಗಿದೆ. ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎನ್ನಲಾಗಿರುವ ತನ್ನ ಪಕ್ಷದ ಮುಖಂಡರನ್ನು ರಕ್ಷಿಸಿಕೊಳ್ಳಲು ಮಮತಾ ಮಾಡಿರುವ ಹತಾಶೆಯ ಕರೆ ಇದಾಗಿದೆ ಎಂದು ಟೀಕಿಸಿದ್ದಾರೆ.
ಇವತ್ತು ಮಮತಾ ಬ್ಯಾನರ್ಜಿಯವರು ಸೀತಾರಾಂ ಯೆಚೂರಿಯವರಿಗೆ ಫೋನ್ ಕರೆ ಮಾಡಿ, ಬಿಜೆಪಿ ವಿರುದ್ಧ ಸಂಘಟಿತ ಹೋರಾಟಕ್ಕೆ ಎಲ್ಲಾ ಪ್ರತಿಪಕ್ಷದವರೂ ಜೊತೆ ಸೇರಬೇಕು ಎಂದು ಹೇಳಿದ್ದರು. ಇದಕ್ಕೆ ಉತ್ತರಿಸಿದ ಯೆಚೂರಿ, ಈಗ ನಾನು ಪ್ರಯಾಣದಲ್ಲಿದ್ದೇನೆ. ಪಕ್ಷದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದ್ದಾಗಿ ಸಿಪಿಐ(ಎಂ) ಪ್ರಧಾನ ಸಮಿತಿ ಸದಸ್ಯ ಮೊಹಮ್ಮದ್ ಸಲೀಂ ಪಿಟಿಐಗೆ ತಿಳಿಸಿದ್ದಾರೆ.
ಇದೊಂದು ಹತಾಶೆಯ ಕರೆಯಾಗಿದೆ. ತೃಣಮೂಲ ಕಾಂಗ್ರೆಸ್‌ನ ಮುಖಂಡರು ಸರಧ ಚಿಟ್‌ಫಂಡ್ ಹಗರಣ ಮತ್ತು ನಾರದ ಪ್ರಕರಣದಲ್ಲಿ ( ಟಿವಿ ಕುಟುಕು ಕಾರ್ಯಾಚರಣೆ)ಯಲ್ಲಿ ಶಾಮೀಲಾಗಿರುವುದಾಗಿ ಆರೋಪವಿದ್ದು ಬಂಧಿತರಾಗಿದ್ದಾರೆ. ತೃಣಮೂಲ ಕಾಂಗ್ರೆಸ್‌ನ(ಟಿಎಂಸಿ) ವಿಶ್ವಾಸಾರ್ಹತೆಯೇ ಸಂದೇಹಾಸ್ಪದವಾಗಿದೆ. ಹೀಗಿರುವಾಗ ಇವರು ಕಪ್ಪುಹಣದ ವಿರುದ್ಧ ಹೋರಾಟದ ಬಗ್ಗೆ ಹೇಗೆ ಮಾತಾಡುತ್ತಾರೆ? ಎಂದು ಸಲೀಂ ಪ್ರಶ್ನಿಸಿದರು.
ಮಮತಾರದ್ದು ಒಂದು ರಾಜಕೀಯ ಗಿಮಿಕ್ ಅಷ್ಟೇ. ಭ್ರಷ್ಟಾಚಾರದ ಮೂಲಕ ಪಶ್ಚಿಮ ಬಂಗಾಲದಲ್ಲಿ ಆಡಳಿತ ನಡೆಸುತ್ತಿರುವವರು ಕಪ್ಪು ಹಣದ ಬಗ್ಗೆ ಹೆಚ್ಚು ಮಾತಾಡಬಾರದು ಎಂದ ಅವರು, ಟಿಎಂಸಿ ಮತ್ತು ಬಿಜೆಪಿ ಮಧ್ಯೆ ರಾಜಕೀಯ ‘ಮ್ಯಾಚ್ ಫಿಕ್ಸಿಂಗ್’ ನಡೆದಿದೆ. ಆದ್ದರಿಂದಲೇ ಸರಧ ಪ್ರಕರಣದಲ್ಲಿ ಸಿಬಿಐ ತನಿಖೆ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದರು. ಮೊದಲು ಆರೋಪಮುಕ್ತರಾಗಿ ಬನ್ನಿ. ಆ ಬಳಿಕ ಕಪ್ಪು ಹಣದ ಬಗ್ಗೆ ಮಾತನಾಡಿ ಎಂದು ಸಲೀಂ ಹೇಳಿದರು.





