ನ್ಯೂಝಿಲೆಂಡ್‌ನಲ್ಲಿ ಪ್ರಬಲ ಭೂಕಂಪನ: ಪಾಕ್ ಕ್ರಿಕೆಟಿಗರಿಗೆ ಶಾಕ್

ಕರಾಚಿ, ಅ.13: ನ್ಯೂಝಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ ರವಿವಾರ 7.4 ರಿಕ್ಟರ್ ಪ್ರಮಾಣದ ಭೂಕಂಪನವಾಗಿದ್ದು, ಪಾಕಿಸ್ತಾನದ ಕ್ರಿಕೆಟ್ ಆಟಗಾರರು ಹಾಗೂ ಅಧಿಕಾರಿಗಳಿಗೆ ಭೂಕಂಪನದ ಅನುಭವವಾಗಿದೆ.
‘‘ನಾವು ಅಭ್ಯಾಸ ಪಂದ್ಯ ನಿಗದಿಯಾಗಿದ್ದ ನಿಲ್ಸನ್‌ನ ಹೊಟೇಲ್‌ವೊಂದರಲ್ಲಿ ತಂಗಿದ್ದೆವು. ಭೂಕಂಪಿಸಿದಾಗ ಎಲ್ಲರೂ ಒಂದು ಕ್ಷಣ ಭಯಭೀತರಾದೆವು. ಅದೊಂದು ಭಯಂಕರ ಅನುಭವ. ನಾವೀಗ ಹೊಟೇಲ್‌ನಿಂದ ಸುರಕ್ಷಿತ ಪ್ರದೇಶಕ್ಕೆ ತೆರಳಿದ್ದೇವೆ ಎಂದು ಪಾಕಿಸ್ತಾನ ತಂಡದ ಮ್ಯಾನೇಜರ್ ವಾಸಿಂ ಬಾರಿ ಹೇಳಿದ್ದಾರೆ.
ಭೂಕಂಪಿಸಿದಾಗ ನಾವೆಲ್ಲರೂ ಹೊಟೇಲ್‌ನ ಏಳನೆ ಮಹಡಿಯಲ್ಲಿದ್ದೆವು. ಹೊಟೇಲ್‌ನ ಸಿಬ್ಬಂದಿ ನಮ್ಮ ಬಗ್ಗೆ ತುಂಬಾ ನಿಗಾವಹಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು ಎಂದು ವಾಸಿಂ ಹೇಳಿದ್ದಾರೆ.
ಪಾಕಿಸ್ತಾನ ನ.17 ರಿಂದ ಕ್ರೈಸ್ಟ್‌ಚರ್ಚ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧ ಪ್ರಥಮ ಟೆಸ್ಟ್ ಪಂದ್ಯ ಆಡಲಿದೆ. ತ್ರಿದಿನ ಅಭ್ಯಾಸ ಪಂದ್ಯದ ಕೊನೆಯ ದಿನ ಮಳೆಗಾಹುತಿಯಾಗಿತ್ತು.
ತಂಡದ ಹೆಚ್ಚಿನ ಎಲ್ಲ ಆಟಗಾರರು ಹೊಟೇಲ್ ರೂಮ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ಟೆಸ್ಟ್ ಪಂದ್ಯ ವೀಕ್ಷಿಸುತ್ತಿದ್ದರು. ಪ್ರಬಲ ಭೂಕಂಪನಕ್ಕೆ ಹೊಟೇಲ್‌ನ ಕಿಟಕಿ ಹಾಗೂ ಬಾಗಿಲುಗಳು ಅಲುಗಾಡಿದ್ದವು. ನಾವು ಕೂಡ ಭಯಭೀತರಾಗಿ ಹೊರ ಓಡಿದೆವು ಎಂದು ಪಾಕ್‌ನ ಮಾಜಿ ಟೆಸ್ಟ್ ನಾಯಕ ವಾಸಿಂ ಹೇಳಿದರು.





