ರಣಜಿ ಟ್ರೋಫಿ: ರಾಜಸ್ಥಾನ ವಿರುದ್ಧ ಕರ್ನಾಟಕ ಆರ್ಭಟ
ಮಾಯಾಂಕ್, ರಾಹುಲ್, ಸಮರ್ಥ್ ಅರ್ಧಶತಕ

ಆಂಧ್ರಪ್ರದೇಶ, ನ.13: ಅತ್ಯುತ್ತಮ ಬ್ಯಾಟಿಂಗ್ ಬಲದಿಂದ ಕರ್ನಾಟಕ ತಂಡ ರಾಜಸ್ಥಾನ ವಿರುದ್ಧ ಇಲ್ಲಿ ರವಿವಾರ ಆರಂಭವಾದ ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯದ ಮೊದಲ ದಿನ ಉತ್ತಮ ಸ್ಕೋರ್ ದಾಖಲಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕದ ಪರ ಮಾಯಾಂಕ್ ಅಗರವಾಲ್(81 ರನ್) ಸರ್ವಾಧಿಕ ರನ್ ಬಾರಿಸಿದರು. ಗಾಯದ ಸಮಸ್ಯೆಯಿಂದಾಗಿ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಕೆ.ಎಲ್. ರಾಹುಲ್ ನಿರ್ಣಾಯಕ 76 ರನ್ ಹಾಗೂ ಆರಂಭಿಕ ದಾಂಡಿಗ ಆರ್. ಸಮರ್ಥ್ 62 ರನ್ ಕೊಡುಗೆ ನೀಡಿದರು.
ಇನಿಂಗ್ಸ್ ಆರಂಭಿಸಿದ ಸಮರ್ಥ್(62 ರನ್, 109 ಎಸೆತ, 10 ಬೌಂಡರಿ, 1 ಸಿಕ್ಸರ್) ಹಾಗೂ ರಾಹುಲ್(76 ರನ್, 85 ಎಸೆತ, 15 ಬೌಂಡರಿ, 1 ಸಿಕ್ಸರ್) ಮೊದಲ ವಿಕೆಟ್ ಜೊತೆಯಾಟದಲ್ಲಿ 111 ರನ್ ಸೇರಿಸಿ ಕರ್ನಾಟಕ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟರು.
ರಾಹುಲ್, ತನ್ವೀರ್‌ಗೆ ಔಟಾದ ತಕ್ಷಣ ಕ್ರೀಸ್‌ಗೆ ಬಂದ ರಾಬಿನ್ ಉತ್ತಪ್ಪ(06) ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ತೆರಳಿದರು. ಮಧ್ಯಮ ಕ್ರಮಾಂಕದ ದಾಂಡಿಗ ಅಗರವಾಲ್(81 ರನ್, 127 ಎಸೆತ, 12 ಬೌಂಡರಿ) ಹಾಗೂ ಸ್ಟುವರ್ಟ್ ಬಿನ್ನಿ(37) 4ನೆ ವಿಕೆಟ್‌ಗೆ 68 ರನ್ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಬಿನ್ನಿ ಔಟಾದ ಬಳಿಕ ಗೌತಮ್(35)ರೊಂದಿಗೆ ಕೈಜೋಡಿಸಿದ ಅಗರವಾಲ್ 5ನೆ ವಿಕೆಟ್‌ಗೆ 53 ರನ್ ಸೇರಿಸಿದರು. 7ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 30 ರನ್ ಸೇರಿಸಿರುವ ಎಸ್. ಗೋಪಾಲ್(22) ಹಾಗೂ ನಾಯಕ ವಿನಯಕುಮಾರ್(25) ಎರಡನೆ ದಿನಕ್ಕೆ ಆಟವನ್ನು ಕಾಯ್ದಿರಿಸಿದರು.
ರಾಜಸ್ಥಾನದ ಪರ ತನ್ವಿರ್‌ವುಲ್ ಹಕ್ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಪಂಕಜ್ ಸಿಂಗ್, ದೀಪಕ್ ಚಾಹರ್ ಹಾಗೂ ಸಲ್ಮಾನ್ ಖಾನ್ ತಲಾ ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ ಪ್ರಥಮ ಇನಿಂಗ್ಸ್: 90 ಓವರ್‌ಗಳಲ್ಲಿ 345/6
(ಮಾಯಾಂಕ್ ಅಗರವಾಲ್ 81, ಕೆಎಲ್ ರಾಹುಲ್ 76, ಸಮರ್ಥ್ 62, ಬಿನ್ನಿ 37, ಗೌತಮ್ 35, ಟಿಎಂವುಲ್‌ಹಕ್ 3-64)
ವಿದರ್ಭ 59 ರನ್‌ಗೆ ಸರ್ವಪತನ: ಕೋಲ್ಕತಾದಲ್ಲಿ ನಡೆದ ದಿನದ ಮತ್ತೊಂದು ರಣಜಿ ಪಂದ್ಯದಲ್ಲಿ ವಿದರ್ಭ ತಂಡ ಮಹಾರಾಷ್ಟ್ರದ ವಿರುದ್ಧ ಮೊದಲ ದಿನದಾಟದಲ್ಲಿ ಕೇವಲ 59 ರನ್‌ಗೆ ಆಲೌಟಾಯಿತು.
ಮಹಾರಾಷ್ಟ್ರದ ಅನುಪಮ್ ಸಂಕ್ಲೇಚಾ ಜೀವನಶ್ರೇಷ್ಠ(7-25) ಬೌಲಿಂಗ್ ಮಾಡಿದರು. ವಿದರ್ಭ ಪರ ಶಬ್ಲಬ್ ಶ್ರೀವಾಸ್ತವ(19) ಟಾಪ್ ಸ್ಕೋರರ್ ಎನಿಸಿಕೊಂಡರು. ಇದಕ್ಕೆ ಉತ್ತರವಾಗಿ ಮಹಾರಾಷ್ಟ್ರ ತಂಡ 3 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿದೆ.
ನಾಗ್ಪುರದಲ್ಲಿ ನಡೆದ ರಣಜಿಯಲ್ಲಿ ರೈಲ್ವೇಸ್‌ನ ಅವಿನಾಶ್ ಯಾದವ್ ಐದು ವಿಕೆಟ್ ಕಬಳಿಸಿ ಬರೋಡಾ ತಂಡವನ್ನು 183 ರನ್‌ಗೆ ಆಲೌಟ್ ಮಾಡಿದರು. ಕಟಕ್‌ನಲ್ಲಿ ನಡೆದ ಪಂದ್ಯದಲ್ಲಿ ನಿತಿನ್ ಸೈನಿ ಹಾಗೂ ರಜತ್ ಪಲಿವಾಲ್ ನೆರವಿನಿಂದ ಹರ್ಯಾಣ ತಂಡ ಜಮ್ಮುಕಾಶ್ಮೀರದ ವಿರುದ್ಧ 5 ವಿಕೆಟ್ ನಷ್ಟಕ್ಕೆ 295 ರನ್ ಗಳಿಸಿದೆ. ಮೈಸೂರಿನಲ್ಲಿ ನಡೆದ ರಣಜಿ ಪಂದ್ಯದಲ್ಲಿ ಮುಂಬೈ ತಂಡ ಉತ್ತರಪ್ರದೇಶದ ವಿರುದ್ಧ 233 ರನ್‌ಗೆ ಆಲೌಟಾಗಿದೆ.







