ಟ್ವಿಟರ್‌ನಲ್ಲಿ ಅವಾಚ್ಯ ಶಬ್ದ ಬಳಕೆ: ವೆಸ್ಟ್‌ಇಂಡೀಸ್ ತಂಡದಿಂದ ಬ್ರಾವೊ ಔಟ್

ಬಾರ್ಬಡೊಸ್, ನ.13: ‘ಅಸ್ವೀಕೃತ ವರ್ತನೆ’ಗಾಗಿ ಡರೆನ್ ಬ್ರಾವೊರನ್ನು ಝಿಂಬಾಬ್ವೆಯಲ್ಲಿ ನಡೆಯಲಿರುವ ತ್ರಿಕೋನ ಏಕದಿನ ಅಂತಾರಾಷ್ಟ್ರೀಯ ಟೂರ್ನಿಗೆ ಪ್ರಕಟಿಸಲಾದ ವೆಸ್ಟ್‌ಇಂಡೀಸ್ ತಂಡದಿಂದ ಕೈಬಿಡಲಾಗಿದೆ ಎಂದು ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿ(ಡಬ್ಲುಐಸಿಬಿ) ಶನಿವಾರ ಹೇಳಿದೆ.
15 ಸದಸ್ಯರನ್ನು ಒಳಗೊಂಡ ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡದಲ್ಲಿ ಬ್ರಾವೊ ಬದಲಿಗೆ ಜೇಸನ್ ಮುಹಮ್ಮದ್ ಅವರನ್ನು ಆಯ್ಕೆ ಮಾಡಲಾಗಿದೆ.
ತನಗೆ ಕೇಂದ್ರ ಗುತ್ತಿಗೆಯನ್ನು ಸಿ ದರ್ಜೆಯನ್ನು ನೀಡಿದ್ದಕ್ಕೆ ಆಕ್ರೋಶ ಗೊಂಡಿದ್ದ ಬ್ರಾವೊ, ಡಬ್ಲು ಐಸಿಬಿ ಅಧ್ಯಕ್ಷ ಡೇವ್ ಕ್ಯಾಮರೂನ್‌ರನ್ನು ‘ಬಿಗ್ ಈಡಿಯಟ್’(ಮಹಾಮೂರ್ಖ) ಎಂದು ಟ್ವಿಟರ್‌ನಲ್ಲಿ ಟೀಕಿಸಿದ್ದರು.
ಬ್ರಾವೊ ಅವರ ಕಳಪೆ ಬ್ಯಾಟಿಂಗ್ ಸರಾಸರಿಯ ಹಿನ್ನೆಲೆಯಲ್ಲಿ ಕೇಂದ್ರ ಗುತ್ತಿಗೆಯನ್ನು ಸಿ ದರ್ಜೆ ನೀಡಲಾಗಿತ್ತು ಎಂದು ಸ್ಪೋರ್ಟ್ಸ್ ಮ್ಯಾಕ್ಸ್ ನೀಡಿದ ಸಂದರ್ಶನದಲ್ಲಿ ಕ್ಯಾಮರೂನ್ ಹೇಳಿದ್ದರು.
ನನಗೆ ಎ ದರ್ಜೆಯ ಗುತ್ತಿಗೆಯ ಪ್ರಸ್ತಾವವನ್ನೇ ನೀಡಿಲ್ಲ. ನೀವು ಕೂಡ ಕಳೆದ ನಾಲ್ಕು ವರ್ಷಗಳಿಂದ ಅಧ್ಯಕ್ಷರಾಗಿ ವಿಫಲರಾಗಿದ್ದೀರಿ. ಆದರೆ, ರಾಜೀನಾಮೆ ನೀಡಿಲ್ಲ. ನೀವು ದೊಡ್ಡ ಮೂರ್ಖರಾಗಿದ್ದೀರಿ ಎಂದು ಬ್ರಾವೊ ಟ್ವೀಟ್ ಮಾಡಿದ್ದರು.
ಬ್ರಾವೊ ಇತ್ತೀಚೆಗೆ ಯುಎಇನಲ್ಲಿ ಕೊನೆಗೊಂಡ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬ್ರಾವೊ ವಿಂಡೀಸ್‌ನ ಪರ ಎರಡನೆ ಗರಿಷ್ಠ ಸ್ಕೋರ್ ದಾಖಲಿಸಿದ್ದರು. ಆದರೆ, ಭಾರತ ವಿರುದ್ಧ ನಡೆದಿದ್ದ ಸ್ವದೇಶಿ ಟೆಸ್ಟ್ ಸರಣಿಯಲ್ಲಿ 7 ಇನಿಂಗ್ಸ್‌ಗಳಲ್ಲಿ ಕೇವಲ 139 ರನ್ ಗಳಿಸಿದ್ದರು.
ಝಿಂಬಾಬ್ವೆಯಲ್ಲಿ ತ್ರಿಕೋನ ಏಕದಿನ ಸರಣಿ ಹರಾರೆಯಲ್ಲಿ ಸೋಮವಾರ ಆರಂಭವಾಗಲಿದೆ. ಸರಣಿಯಲ್ಲಿ ಆತಿಥೇಯ ಝಿಂಬಾಬ್ವೆ, ಶ್ರೀಲಂಕಾ ಹಾಗೂ ವೆಸ್ಟ್‌ಇಂಡೀಸ್ ತಂಡಗಳು ಭಾಗವಹಿಸಲಿವೆ.







