ಭುಜ ಆಪರೇಶನ್: ಸ್ಟೇಯ್ನಗೆ ಆರು ತಿಂಗಳು ವಿಶ್ರಾಂತಿ

ಕೇಪ್‌ಟೌನ, ನ.13: ಭುಜನೋವಿನಿಂದ ಬಳಲುತ್ತಿರುವ ದಕ್ಷಿಣ ಆಫ್ರಿಕದ ಸ್ಟಾರ್ ಬೌಲರ್ ಡೇಲ್ ಸ್ಟೇಯ್ನಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಕನಿಷ್ಠ ಆರು ತಿಂಗಳು ಸಕ್ರಿಯ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ.
ತಿಂಗಳಾರಂಭದಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಸ್ಟೇಯ್ನ್ ಭುಜದ ಮೂಳೆ ಮುರಿದಿತ್ತು ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕ ರವಿವಾರ ಹೇಳಿದೆ.
33ರ ಪ್ರಾಯದ ಸ್ಟೇಯ್ನಾ ಶಸ್ತ್ರಚಿಕಿತ್ಸೆಯ ನಿಮಿತ್ತ ಕೇಪ್‌ಟೌನ್‌ಗೆ ವಾಪಸಾಗಿದ್ದರು. ಗುರುವಾರ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅವರು ಮತ್ತೊಮ್ಮೆ ಬೌಲಿಂಗ್ ನಡೆಸುವ ಮೊದಲು ಕನಿಷ್ಠ ಆರು ತಿಂಗಳು ವಿಶ್ರಾಂತಿ ಪಡೆಯುವ ಅಗತ್ಯವಿದೆ ಎಂದು ದಕ್ಷಿಣ ಆಫ್ರಿಕ ತಂಡದ ಮ್ಯಾನೇಜರ್ ಮುಹಮ್ಮದ್ ಮೂಸಾಜಿ ಹೇಳಿದ್ದಾರೆ.
ಗಾಯ ಗುಣಮುಖವಾಗಲು ಸಾಕಷ್ಟು ಸಮಯ ನೀಡುವುದು ಅತ್ಯಂತ ಮುಖ್ಯ. ಅವರು ಮತ್ತೊಮ್ಮೆ ಬೌಲಿಂಗ್ ನಡೆಸಬೇಕಾದರೆ ನೋವಿನಿಂದ ಸಂಪೂರ್ಣ ಮುಕ್ತರಾಗಿರಬೇಕು. ಮುರಿದಿರುವ ಮೂಳೆ ತೃಪ್ತಿಕರವಾಗಿ ಗುಣಮುಖವಾದ ಬಳಿಕ ಪುನಶ್ಚೇತನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅದಕ್ಕೆ ಇನ್ನು ಕೆಲವುವಾರ ಬೇಕಾಗಬಹುದು. ಅವರು ಯಶಸ್ವಿಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸಾಗುತ್ತಾರೆಂಬ ವಿಶ್ವಾಸ ನಮಗಿದೆ ಎಂದು ದಕ್ಷಿಣ ಆಫ್ರಿಕದ ಮ್ಯಾನೇಜರ್ ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕದ ಅತ್ಯಂತ ಯಶಸ್ವಿ ಟೆಸ್ಟ್ ಬೌಲರ್ ಶಾನ್ ಪೊಲಾಕ್‌ರ ದಾಖಲೆಯನ್ನು ಮುರಿಯಲು ಕೇವಲ 4 ವಿಕೆಟ್ ಅಗತ್ಯವಿರುವ ಸ್ಟೇಯ್ನ್‌ಗೆ ಆಸ್ಟ್ರೆಲಿಯ ವಿರುದ್ಧ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡನೆ ಇನಿಂಗ್ಸ್‌ನ ವೇಳೆ ಬೌಲಿಂಗ್ ಮಾಡುತ್ತಿದ್ದಾಗ ಭುಜನೋವು ಕಾಣಿಸಿಕೊಂಡಿದೆ.
ಕಳೆದ ವರ್ಷ ಡಿಸೆಂಬರ್ ವೇಳೆ ಡರ್ಬನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ ವೇಳೆ ಸ್ಟೇಯ್ನ್‌ಗೆ ಭುಜನೋವು ಕಾಣಿಸಿಕೊಂಡಿದ್ದು, ಆಗ ಅವರು ಸರಣಿಯಿಂದ ಹೊರಗುಳಿದಿದ್ದರು. ಮಾರ್ಚ್‌ನಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನ ವೇಳೆ ತಂಡಕ್ಕೆ ವಾಪಸಾಗಿದ್ದರು. ಆಗಸ್ಟ್‌ನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ 8 ವಿಕೆಟ್ ಪಡೆದಿದ್ದರು. ಸ್ಟೇಯ್ನ್ 22.30ರ ಸರಾಸರಿಯಲ್ಲಿ ಒಟ್ಟು 417 ವಿಕೆಟ್‌ಗಳನ್ನು ಪಡೆದಿದ್ದಾರೆ.







