ಕಿರು ಉದ್ದಿಮೆ, ಗ್ರಾಮೀಣ ಗ್ರಾಹಕರ ಮೇಲೆ ಹೆಚ್ಚಿನ ಪರಿಣಾಮ
ನೋಟು ಅಮಾನ್ಯ ನಿರ್ಧಾರ
ಹೊಸದಿಲ್ಲಿ, ನ.13: ನೋಟು ಅಮಾನ್ಯ ಗೊಳಿಸುವ ನಿರ್ಧಾರದಿಂದ ಕಿರು ಉದ್ದಿಮೆಗಳು ಮತ್ತು ಗ್ರಾಮೀಣ ಗ್ರಾಹಕರ ಮೇಲೆ ಹೆಚ್ಚಿನ ಪರಿಣಾಮವಾಗಲಿದೆ ಎಂದು ಟಾಟಾ ಸ್ಟೀಲ್ ಇಂಡಿಯಾದ ಆಗ್ನೇಯ ಏಶ್ಯಾ ವಿಭಾಗದ ಆಡಳಿತ ನಿರ್ದೇಶಕ ಟಿ.ವಿ.ನರೇಂದ್ರನ್ ಅಭಿಪ್ರಾಯಪಟ್ಟಿದ್ದಾರೆ. ಎರಡನೆಯ ಹಂತದ ಸ್ಟೀಲ್ ಉತ್ಪಾದನೆಯು ಸಣ್ಣ ಸಂಸ್ಥೆಗಳಲ್ಲಿ ನಡೆಯುತ್ತದೆ. ಇಲ್ಲಿ ಬಹುತೇಕ ನಗದು ರೂಪದ ವ್ಯವಹಾರ ಇರುವ ಕಾರಣ ಈ ಸಂಸ್ಥೆಗಳ ಕಾರ್ಯನಿರ್ವಹಣೆ ತೊಂದರೆಗೆ ಸಿಲುಕಿದೆ.ಕ್ರಮೇಣ ಬೃಹತ್ ಸಂಸ್ಥೆಗಳ ಮೇಲೆ ಇದು ಪರಿಣಾಮ ಬೀರಲಿದೆ .ಗ್ರಾಮೀಣ ಮಟ್ಟದಲ್ಲಿ ಹೆಚ್ಚಾಗಿ ನಗದು ರೂಪದಲ್ಲಿ ವ್ಯವಹಾರ ನಡೆಯುವುದರಿಂದ ಗ್ರಾಮೀಣ ಮಟ್ಟದಲ್ಲಿ ಸ್ಟೀಲ್ ಉತ್ಪನ್ನಗಳ ಬೇಡಿಕೆಯ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ವದ ಪ್ರಮುಖ 10 ಸ್ಟೀಲ್ ಉತ್ಪಾದಕರ ಪಟ್ಟಿಯಲ್ಲಿ ಸೇರಿರುವ ಟಾಟಾ ಸ್ಟೀಲ್ ಇಂಡಿಯಾ ತಿಳಿಸಿದೆ. ನಮ್ಮ ಮತ್ತು ಹಂಚಿಕೆದಾರರ(ಡಿಸ್ಟ್ರಿಬ್ಯೂಟರ್ಸ್) ನಡುವಿನ ವ್ಯವಹಾರ ಹೆಚ್ಚಾಗಿ ಆರ್‌ಟಿಜಿಎಸ್(ಬ್ಯಾಂಕ್‌ನಿಂದ ಬ್ಯಾಂಕ್‌ಗೆ ನಿಧಿಯ ವರ್ಗಾವಣೆ) ಪ್ರಕ್ರಿಯೆಯ ಮೂಲಕ ನಡೆಯುತ್ತಿದೆ. ಹಂಚಿಕೆದಾರರ ಮತ್ತು ವಿತರಕರು/ವ್ಯಾಪಾರಿಗಳ ನಡುವಿನ ವ್ಯವಹಾರ ಕೂಡಾ ಆರ್‌ಟಿಜಿಎಸ್ ಮೂಲಕವೇ ನಡೆಯುತ್ತಿದೆ. ಆದರೆ ವ್ಯಾಪಾರಿಗಳ ಮತ್ತು ಗ್ರಾಹಕರ ನಡುವಿನ ವ್ಯವಹಾರ ಹೆಚ್ಚಾಗಿ ನಗದು ರೂಪದಲ್ಲೇ ನಡೆಯುತ್ತದೆ ಎಂದು ಸಂಸ್ಥೆ ತಿಳಿಸಿದೆ. ಆದ್ದರಿಂದ ಆರಂಭಿಕ ಹಂತದಲ್ಲಿ ಕೆಲ ದಿನ ಸಮಸ್ಯೆ ಇರುವುದು ಸಹಜ. ಆದರೆ ಇದು ಸುದೀರ್ಘಾವಧಿಯ ಸಮಸ್ಯೆಯಾಗಿರದು. ರಿಯಲ್ ಎಸ್ಟೇಟ್ ಮಾರು ಕಟ್ಟೆಯ ಮೇಲೆ ಆಗುವ ಪರಿಣಾಮದ ಬಗ್ಗೆ ಕುತೂ ಹಲವಿದೆ. ಉಳಿದಂತೆ ಗ್ರಾಮೀಣ ಮಾರುಕಟ್ಟೆ ತ್ವರಿತವಾಗಿ ಚೇತರಿಸಿಕೊಳ್ಳಲಿದೆ ಎಂದು ನರೇಂದ್ರನ್ ಅಭಿಪ್ರಾಯಪಟ್ಟಿದ್ದಾರೆ. ದೇಶದ ಸ್ಟೀಲ್ ಉತ್ಪಾದನೆಯ ಅರ್ಧಾಂಶದಷ್ಟನ್ನು ಎರಡನೆಯ ಹಂತದ ಸ್ಟೀಲ್ ಉತ್ಪಾದಕರಿಂದ ಪಡೆಯಲಾಗುತ್ತದೆ. ಇವರು ಕಬ್ಬಿಣದ ಚೂರು ಮತ್ತು ಗುಜರಿ ವಸ್ತುಗಳನ್ನು ಉಪಯೋಗಿಸಿ ಸ್ಟೀಲ್ ಉತ್ಪಾದಿಸುತ್ತಾರೆ. ಆದರೆ ಇದೀಗ ಟಾಟಾ ಸ್ಟೀಲ್, ಜೆಎಸ್‌ಡಬ್ಲೂ ಸ್ಟೀಲ್, ಆರ್‌ಎನ್‌ಎಲ್, ಜೆಎಸ್‌ಪಿಎಲ್ ಮತ್ತಿತರ ಸಂಸ್ಥೆಗಳು ತಮ್ಮ ಕಾರ್ಯವ್ಯಾಪ್ತಿಯನ್ನು ಮತ್ತಷ್ಟು ವ್ಯಾಪಿಸಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯು ಸಂಘಟಿತ ಕ್ಷೇತ್ರದತ್ತ ಸರಿಯುತ್ತಿದೆ. ವಿಶ್ವದಲ್ಲಿ ಅತ್ಯಧಿಕ ಸ್ಟೀಲ್ ಉತ್ಪಾದಿಸುವ ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದ್ದು ದೇಶದಲ್ಲಿ 2015ರಲ್ಲಿ 89.58 ಮಿಲಿಯನ್ ಟನ್ ಸ್ಟೀಲ್ ಉತ್ಪಾದಿಸಲಾಗಿದೆ.





