ಅನ್ನದಾತನ ಅಳಲಿಗೆ ಸರಕಾರ ಸ್ಪಂದಿಸಲಿ
ಮಾನ್ಯರೆ,
ಕಳೆದ ಆರು ವರ್ಷಗಳಿಂದ ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಆಗುತ್ತಿರುವುದರಿಂದ ಅಂತರ್ಜಲ ಮಟ್ಟ ಕುಸಿತ ಕಂಡಿದೆ. ಇತ್ತ ಕೆರೆ,ಕೊಳ್ಳ,ಹಳ್ಳ, ಬಾವಿ,ಬೋರ್‌ವೆಲ್‌ಗಳು ನೀರಿಲ್ಲದೆ ಬತ್ತಿ ಬರಿದಾಗಿವೆ. ಮಳೆಯನ್ನೇ ನಂಬಿ ಸಾವಿರಾರು ರೂ. ಸಾಲ ಮಾಡಿ ಬೆಳೆ ಬಿತ್ತಿದ ರೈತರ ಪೈರು ಒಣಗುತ್ತಿವೆ. ಇದರಿಂದಾಗಿ ರೈತರು ನಿತ್ಯ ಸಂಕಷ್ಟ ಪಡುವಂತಾಗಿದೆ.
ಪ್ರಸಕ್ತ ವರ್ಷ ಮಳೆ ಅಭಾವ ಉಂಟಾಗಿರುವುದರಿಂದ ರಾಜ್ಯದಲ್ಲಿ 140 ತಾಲೂಕುಗಳಲ್ಲಿ ಬರದ ಛಾಯೆ ಮೂಡಿದ್ದು 16 ಕೋಟಿಗಿಂತ ಹೆಚ್ಚು ರೈತರ ಬೆಳೆ ನಷ್ಟ ಆಗಿದೆ ಎಂದು ಅಂದಾಜು ಮಾಡಲಾಗಿದೆ. ಡಿಸೆಂಬರ್‌ನಲ್ಲಿ ಆರಂಭವಾಗಬೇಕಿದ್ದ ಚಳಿ ಉತ್ತರ ಕರ್ನಾಟಕ ಭಾಗದ ಜನರಿಗೆ ಈಗಲೇ ಮೈ ನಡುಗಿಸುತ್ತಿದೆ. ಒಟ್ಟಾರೆ ಈ ವರ್ಷ ರಾಜ್ಯದ ರೈತರ ಬದುಕು ಕಣ್ಣಿರಿನಲ್ಲೇ ಕೈತೊಳೆಯುವಂತಾಗಿದೆ.
ಆದ್ದರಿಂದ ಸರಕಾರ ಈಗಾಗಲೇ 139 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿದ್ದು, ಪ್ರತಿ ತಾಲೂಕಿಗೂ ಶೀಘ್ರವೇ ಹಣ ಬಿಡುಗಡೆ ಮಾಡಬೇಕು. ಸಂಕಷ್ಟದಲ್ಲಿರುವ ರೈತ ಕುಟುಂಬಗಳನ್ನು ರಕ್ಷಿಸಲು ಮುಂದಾಗಬೇಕು. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಮತ್ತು ಜಾನುವಾರುಗಳಿಗೆ ಆಹಾರಕ್ಕೆ ಮುನ್ನೆಚ್ಚರಿಕೆಯ ಕ್ರಮಗಳನ್ನು ತಗೆದುಕೊಳ್ಳುವ ನಿಟ್ಟಿನಲ್ಲಿ ಸರಕಾರ ಗಂಭೀರವಾಗಿ ಚಿಂತಿಸಲಿ.





