ನೋಟು ನಿಷೇಧ: ದೂರಗಾಮಿ ಯೋಜನೆ
ಮಾನ್ಯರೆ,
ನೋಟು ನಿಷೇಧ ಇದೀಗ ಸಾರ್ವಜನಿಕವಾಗಿ ತೀವ್ರ ಟೀಕೆಗಳನ್ನು ಎದುರಿಸುತ್ತಿದೆ. ಆದರೆ ಮೋದಿ ಅಧಿಕಾರಕ್ಕೆ ಬಂದ ಹೊಸದರಲ್ಲಿ ಹಲವರು ಕಪ್ಪು ಹಣ ನಿಷೇಧಿಸಿ ಎಂದೂ ಕೂಗು ಹಾಕಿದ್ದರು. ಇದೀಗ ಅದಕ್ಕೆ ಕ್ರಮ ತೆಗೆದುಕೊಂಡಾಗ ಬೇರೆಯೇ ರಾಗ ಎಳೆಯುತ್ತಿದ್ದಾರೆ. ನೋಟು ನಿಷೇಧ ಮಾಡುವುದಕ್ಕಿಂತ ಪರಿಣಾಮಕಾರಿಯಾದ ಇನ್ನೊಂದು ದಾರಿ ‘ಕಪ್ಪು ನಿಷೇಧಕ್ಕೆ’ ಇದೆಯೇ? ಹೌದು. ಈ ನಿಷೇಧದಿಂದ ಕೆಲವು ದುಷ್ಪರಿಣಾಮಗಳು ಉಂಟಾಗಬಹುದು. ಆದರೆ ಭವಿಷ್ಯದಲ್ಲಿ ಕೆಲವು ವರ್ಷಗಳ ಕಾಲವಂತೂ ಖೋಟಾ ನೋಟು ಇಲ್ಲವಾಗುವುದಿಲ್ಲವೇ? ಜೊತೆಗೆ ಕೆಲವರು ತಮ್ಮ ಹಣವನ್ನು ಕಮಿಷನ್ ಕೊಟ್ಟು ಬಿಳಿ ಮಾಡುತ್ತಾರೆ. ಆದರೆ ಅದರಿಂದಾಗಿ ಅವರು ಬ್ಯಾಂಕುಗಳಲ್ಲಿ ವ್ಯವಹಾರ ಮಾಡಿದಂತಾಯಿತು. ಅಲ್ಪವಾದರೂ ಹಣಗಳು ಒಂದು ಕಡೆಯಿಂದ ಬೇರೆ ಬೇರೆ ರೂಪಗಳಲ್ಲಿ ವಿತರಣೆಯಾದಂತಾಗಲಿಲ್ಲವೇ? ಒಂದೇ ಕಡೆ ಹಣ ಇರುವುದಕ್ಕಿಂತ ಅವುಗಳು ಹೊರ ಬಂದು ಅಲ್ಪಸ್ವಲ್ಪವಾದರೂ ವಿತರಣೆಯಾಗುವುದು ಒಳ್ಳೆಯದಲ್ಲವೇ?
ಏನೂ ಮಾಡದಿರುವುದಕ್ಕಿಂತ ಏನಾದರೂ ಮಾಡಿ ನೋಡುವುದು ಉತ್ತಮ. ಯಾವ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದರೂ ಕಪ್ಪು ಹಣದ ವಿಷಯದಲ್ಲಿ ಪೂರ್ತಿ ಪ್ರಾಮಾಣಿಕವಾಗಿರುವುದಿಲ್ಲ. ಅವರವರ ರಕ್ಷಣೆಯನ್ನು ಅವರು ನೋಡಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಕೆಲವರಿಗೆ ಮೊದಲೇ ನೋಟು ನಿಷೇಧದ ಮಾಹಿತಿ ಗೊತ್ತಿರಬಹುದು. ಅವರು ನೋಟನ್ನು ಬಿಳಿ ಮಾಡಿರಲೂ ಬಹುದು. ಆದರೆ ಈ ಹಿಂದೆಯೇ ಸರಕಾರ ಎಲ್ಲರಿಗೂ ಎಚ್ಚರಿಗೆ ನೀಡಿ, ಕಪ್ಪನ್ನು ಬಿಳಿ ಮಾಡುವುದಕ್ಕೆ ಅವಕಾಶ ನೀಡಿತ್ತು. ಅವರು ಆಗಲೇ ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿತ್ತು. ಎಲ್ಲದಕ್ಕೂ ಮೋದಿ ಸರಕಾರವನ್ನು ಟೀಕಿಸುವುದು ಸರಿಯಲ್ಲ. ಸರಿಪಡಿಸುವಾಗ ಅದರ ಕಾವು ಜನಸಾಮಾನ್ಯರಿಗೂ ತಾಗುತ್ತದೆ. ಮೊದಲು ಕಷ್ಟವಾಗಬಹುದು. ಆದರೆ ದೂರಗಾಮಿಯಾಗಿ ಅವರಿಗೆ ಅದರಿಂದ ಬಹಳಷ್ಟು ಅನುಕೂಲಗಳಿವೆ.





