ಬ್ಯಾಂಕ್ ಸಿಬ್ಬಂದಿಯ ವರ್ತನೆ ಸರಿಯಿಲ್ಲ
ಮಾನ್ಯರೆ,
ನೋಟು ನಿಷೇಧದ ಉದ್ದೇಶವೇನೋ ಚೆನ್ನಾಗಿದೆ. ಆದರೆ ಅದರಿಂದ ವೃದ್ಧರಿಗೆ, ಅಂಗವಿಕಲರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಯುವಕರು, ಸದೃಢರು ಎಷ್ಟು ಹೊತ್ತು ಬೇಕಾದರೂ ಬ್ಯಾಂಕಿನಲ್ಲಿ ಕಾಯಬಹುದು. ಆದರೆ ವೃದ್ಧರಿಗೆ ಅದು ಸಾಧ್ಯವೇ? ಜೊತೆಗೆ ಮಾನಸಿಕ ಆತಂಕ, ಭಯ ಬೇರೆ. ಇವುಗಳ ನಡುವೆ ವೃದ್ಧರು ಬ್ಯಾಂಕಿನಲ್ಲಿ ಇಡೀ ದಿನ ಕಾದರೆ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲವೇೆ? ಆದುದರಿಂದ ಬ್ಯಾಂಕುಗಳು ವೃದ್ಧರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಬೇಕು. ಬ್ಯಾಂಕುಗಳಲ್ಲಿ ಕೆಲವು ಸಿಬ್ಬಂದಿ ಅತ್ಯಂತ ಕ್ರೂರವಾಗಿ ನಡೆದುಕೊಳ್ಳುತ್ತಿದ್ದಾರೆ. ಒರಟಾಗಿ ಉತ್ತರಿಸುತ್ತಾರೆ. ಇವು ಗ್ರಾಹಕರಲ್ಲಿ ಇನ್ನಷ್ಟು ಆತಂಕ, ಭಯ, ನೋವುಗಳನ್ನು ಬಿತ್ತುತ್ತವೆ. ನೋಟುಗಳಿಲ್ಲದಿದ್ದರೂ ಜನರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಬ್ಯಾಂಕ್ ಸಿಬ್ಬಂದಿ ಮಾಡಬೇಕು. ಇಂದು ಬ್ಯಾಂಕ್ ಸಿಬ್ಬಂದಿ ಯ ವರ್ತನೆಯಿಂದಾಗಿಯೇ ಅರ್ಧಕ್ಕರ್ಧ ಜನರು ಕಂಗಾಲಾಗಿದ್ದಾರೆ.
Next Story





