ಶಿವಸೇನೆಯ ಸರ್ಜಿಕಲ್ ದಾಳಿಗೆ ಬಿಜೆಪಿ ತಿರುಗೇಟು
ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದ ಬಿಜೆಪಿ ಸಂಸದ

ಮುಂಬೈ, ನ.14: ನಗರದ ಕೆಲ ಜನತೆಯ ಕಪ್ಪುಹಣವನ್ನು ಯಾವ ಬೋಗಸ್ ಕಂಪನಿಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಬಿಜೆಪಿ ಸಂಸದ ಕೀರ್ತಿ ಸೋಮಯ್ಯ ಗುಡುಗಿದ್ದಾರೆ.
"ಮುಂದಿನ ವಾರ ಈ ಪಟ್ಟಿ ಬಿಡುಗಡೆ ಮಾಡುವ ಮೂಲಕ ಕಪ್ಪುಹಣದ ಮೇಲಿನ ಸರ್ಜಿಕಲ್ ದಾಳಿ ಎಂದರೆ ಏನು ಎಂದು ಶಿವಸೇನೆ ಅಧ್ಯಕ್ಷರಿಗೆ ತೋರಿಸಬಲ್ಲೆ" ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಮೋದಿ ಕಪ್ಪು ಹಣವನ್ನು ದೇಶಕ್ಕೆ ವಾಪಾಸು ತರಲು ಸ್ವಿಸ್ ಬ್ಯಾಂಕ್ ಖಾತೆಗಳ ಮೇಲೆ ಸರ್ಜಿಕಲ್ ದಾಳಿ ನಡೆಸಲಿ ಎಂದು ಸವಾಲು ಹಾಕಿದ್ದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿಕೆಗೆ ಪ್ರತಿಯಾಗಿ ಸೋಮಯ್ಯ ಈ ಹೇಳಿಕೆ ನೀಡಿದ್ದಾರೆ.
ಈ ನಿರ್ಧಾರದಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಠಾಕ್ರೆ "ಚಿತ್ರಹಿಂಸೆ" ಎಂದು ಬಣ್ಣಿಸಿದ್ದರು. ಜನ ನಿಮ್ಮ ಬಗ್ಗೆ ಪೂರ್ಣ ವಿಶ್ವಾಸ ಹೊಂದಿದ್ದಾರೆ. ಅದಕ್ಕೆ ದ್ರೋಹ ಬಗೆಯಬೇಡಿ. ಜನರ ಸರ್ಜಿಕಲ್ ದಾಳಿಯ ಪರಿಣಾಮವನ್ನು ನೀವು ನೋಡಲಿದ್ದೀರಿ ಎಂದು ಉದ್ಧವ್ ಹೇಳಿಕೆ ನೀಡಿದ್ದರು.
ಮಾಯಾವತಿ, ಮುಲಾಯಂ ಸಿಂಗ್ ಹಾಗೂ ಉದ್ಧವ್ ಠಾಕ್ರೆ ಅವರಿಗೆ ನಿಜವಾಗಿ ಬಡಜನರ ಬಗ್ಗೆ ಕಾಳಜಿ ಇದೆಯೇ ಅಥವಾ ಹಣದ ಪೆಟ್ಟಿಗೆಗಳ ಬಗ್ಗೆ ಕಾಳಜಿಯೇ ಎನ್ನುವುದನ್ನು ಸ್ಪಷ್ಟಪಡಿಸಲಿ ಎಂದು ಸೋಮಯ್ಯ ವ್ಯಂಗ್ಯವಾಡಿದ್ದಾರೆ.





