ದುಬೈನಲ್ಲಿ ವಿಶ್ವದಾಖಲೆ ನಿರ್ಮಿಸಿದ ಭಾರತೀಯ

ದುಬೈ, ನ.14: ದುಬೈ ಮೂಲದ ಭಾರತದ ಸಾಮಾಜಿಕ ಕಾರ್ಯಕರ್ತ ವೆಂಕಟರಾಮ್ ಕೃಷ್ಣಮೂರ್ತಿ ಚಾರಿಟಿ ಉದ್ದೇಶಕ್ಕಾಗಿ 24 ಗಂಟೆಯಲ್ಲಿ ಗರಿಷ್ಠ ಪ್ರಮಾಣದ ಸ್ಟೇಶನರಿ ವಸ್ತುಗಳನ್ನು ಸಂಗ್ರಹಿಸಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ನಿರ್ಮಿಸಿದ್ದಾರೆ.
ವಿಶ್ವದಾದ್ಯಂತ ಪಸರಿಸಿರುವ ಸುಮಾರು ಒಂದು ಲಕ್ಷ ನಿರಾಶ್ರಿತ ಮಕ್ಕಳಿಗೆ ನೆರವಾಗುವ ಉದ್ದೇಶದಿಂದ ಕಳೆದ ತಿಂಗಳು ಶಾಲೆಗಳು, ಕಾರ್ಪೋರೇಟ್ಸ್ ಹಾಗೂ ಸಾರ್ವಜನಿಕರಿಂದ 10,975 ಕೆಜಿ ಸ್ಟೇಶನರಿಗಳನ್ನು ಕೃಷ್ಣಮೂರ್ತಿ ಸಂಗ್ರಹಿಸಿದ್ದರು.
ದಾನಿಗಳು ನೀಡಿರುವ ವಸ್ತುಗಳ ಪೈಕಿ 50,000 ನೋಟ್‌ಬುಕ್ಸ್, 3 ಲಕ್ಷ ಪೆನ್ಸಿಲ್‌ಗಳು ಹಾಗೂ 2000 ಶಾಲಾ ಬ್ಯಾಗ್‌ಗಳಿವೆ. ಇದರ ಜೊತೆಗೆ ಬಣ್ಣದ ಪೆನ್ಸಿಲ್ , ಪೆನ್ಸಿಲ್ ಶಾರ್ಪ್ನರ್, ಕತ್ತರಿಗಳು ಇವೆ. ಈ ಅಭಿಯಾನದಲ್ಲಿ ನಾಲ್ಕು ನೂರು ಸ್ವಯಂಸೇವಕರು ಕೈಜೋಡಿಸಿದ್ದರು.
ಎಮಿರೆಟ್ಸ್ ರೆಡ್ ಕ್ರೆಸೆಂಟ್ ಸಂಸ್ಥೆ ಈ ಎಲ್ಲ ವಸ್ತುಗಳನ್ನು ನಿರಾಶ್ರಿತರ ಶಿಬಿರಕ್ಕೆ ತಲುಪಿಸಲಿದೆ.
‘‘ವಿಶ್ವದಾದ್ಯಂತವಿರುವ ಬಡ ಮಕ್ಕಳ ಮುಖದಲ್ಲಿ ನಗು ತರಿಸುವುದು ನಮ್ಮ ಮಿಶನ್‌ನ ಉದ್ದೇಶ’’ ಎಂದು ಕೃಷ್ಣಮೂರ್ತಿ ಹೇಳಿದ್ದಾರೆ.
ತಮಿಳುನಾಡಿನ ತಿರುನೆಲ್‌ವೆಲ್ಲಿಯಲ್ಲಿ ಜನಿಸಿರುವ 57ರ ಹರೆಯದ ಕೃಷ್ಣಮೂರ್ತಿ ವೃತ್ತಿಯಲ್ಲಿ ಚಾರ್ಟಡ್ ಎಕೌಂಟೆಂಟ್. ಅವರು 1992ರಿಂದ ದುಬೈನಲ್ಲಿ ನೆಲೆಸಿದ್ದಾರೆ. ಅವರ ಎನ್‌ಜಿಒ ಸಂಸ್ಥೆ ‘ಎಜುಕೇಶನ್ ಫಾರ್ ಆಲ್’ ಬಳಕೆಯಾದ ಪುಸ್ತಕಗಳು ಹಾಗೂ ಆಟಿಕೆಗಳನ್ನು ಸ್ಕೂಲ್ ಲೈಬ್ರರಿ ಪ್ರಾಜೆಕ್ಟ್‌ನಡಿ ಭಾರತ ಹಾಗೂ ಆಫ್ರಿಕ ದೇಶಗಳಲ್ಲಿ ಸಂಗ್ರಹಿಸುತ್ತಿದೆ. ಸಂಗ್ರಹವಾದ ವಸ್ತುವನ್ನು ಬಡ ಮಕ್ಕಳಿಗೆ ನೀಡುತ್ತಿದೆ.







