ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುತ್ತಿರುವ ತನ್ನ ಬೆಂಬಲಿಗರಿಗೆ ಸ್ಪಷ್ಟ ಸೂಚನೆ ನೀಡಿದ ಟ್ರಂಪ್

ವಾಷಿಂಗ್ಟನ್, ನ.14: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಡೊನಾಲ್ಡ್ ಟ್ರಂಪ್ ನೀಡಿದ ಪ್ರಥಮ ಟೆಲಿವಿಷನ್ ಸಂದರ್ಶನದಲ್ಲಿ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡದಂತೆ ತಮ್ಮ ಬೆಂಬಲಿಗರಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಲ್ಯಾಟಿನೋಗಳು ಹಾಗೂ ಮುಸ್ಲಿಮರು ಕಿರುಕುಳಕ್ಕೊಳಗಾಗುತ್ತಿದ್ದಾರೆಂದು ಸಿಬಿಎಸ್ ಚಾನೆಲ್ನ ಆಂಕರ್ ಲೆಸ್ಲಿ ಸ್ಟಾಹಿ ‘‘60 ಮಿನಿಟ್ಸ್’ ಕಾರ್ಯಕ್ರಮದಲ್ಲಿ ಹೇಳಿದಾಗ ಟ್ರಂಪ್, ‘‘ನನಗೆ ಇದನ್ನು ಕೇಳಿ ತುಂಬಾ ನೋವಾಯಿತು’’ ಎಂದು ಹೇಳಿದರಲ್ಲದೆ ‘‘ಸ್ಟಾಪ್ ಇಟ್’’ ಎಂದು ತಮ್ಮ ಬೆಂಬಲಿಗರಿಗೆ ಹೇಳಿದರು.
ಜನಾಂಗೀಯ ನಿಂದನೆಗೈಯ್ಯುವ ಘೋಷಣೆಗಳು ಹಾಗೂ ಸಂದೇಶಗಳನ್ನು ಶಾಲೆಗಳಲ್ಲಿ ಬರೆಯಲಾಗಿದೆಯೆಂದು ಲೆಸ್ಲಿ ಹೇಳಿದಾಗ ಟ್ರಂಪ್, ತಾವು ‘ಸ್ಟಾಪ್ ಇಟ್’ ಎಂದು ಅವರಿಗೆ ಕ್ಯಾಮರಾ ಮುಂದೆಯೇ ಹೇಳುವುದಾಗಿ ತಿಳಿಸಿದರು.
ಟ್ರಂಪ್ ಅವರ ವಿಜಯ ಈಗಾಗಲೇ ದೇಶದ ಅಲ್ಪಸಂಖ್ಯಾತರ ಮನಸ್ಸಿನಲ್ಲಿ ಅಭದ್ರತೆಯ ಭಾವನೆ ಮೂಡಿಸಿದೆ.
ತಾವು ಹಿಲರಿ ಕ್ಲಿಂಟನ್ ಅವರನ್ನು ಸೋಲಿಸಿದಂದಿನಿಂದ ದೇಶದಾದ್ಯಂತ ಹಲವು ನಗರಗಳಲ್ಲಿ ಭುಗಿಲೆದ್ದಿರುವ ಪ್ರತಿಭಟನೆಗಳನ್ನು ಟ್ರಂಪ್ ಕಟುವಾಗಿ ಟೀಕಿಸಿದ್ದಾರೆ.
ತಾವು ಗೆದ್ದಂದಿನಿಂದ ಕೆಲ ಬಿಳಿಯರ ಶಾಲೆಗಳಲ್ಲಿ ಅಲ್ಪಸಂಖ್ಯಾತರ ವಿರುದ್ಧ ಜನಾಂಗೀಯ ನಿಂದನೆಗೈದ ಒಂದೆರಡು ಘಟನೆಗಳು ತಮ್ಮ ಗಮನಕ್ಕೆ ಬಂದಿವೆ ಎಂದೂ ಅವರು ಹೇಳಿದರು.
‘‘ಹಾಗೆ ಮಾಡಬೇಡಿ ಎಂದು ನಾನು ಹೇಳುತ್ತೇನೆ. ನಾನು ಈ ದೇಶವನ್ನು ಒಂದಾಗಿಸುತ್ತೇನೆ’’ ಎಂದು ಅವರು ತಿಳಿಸಿದ್ದಾರೆ.
ಎಫ್ ಬಿ ಐ ನಿರ್ದೇಶಕ ಜೇಮ್ಸ್ ಕೋನಿ ಅವರ ರಾಜೀನಾಮೆ ಕೇಳಬೇಕೇ ಅಥವಾ ಬೇಡವೇ ಎಂಬ ಬಗ್ಗೆ ತಾವು ಇನ್ನಷ್ಟೇ ನಿರ್ಧರಿಸಬೇಕಿದೆ ಎಂದು ಟ್ರಂಪ್ ಹೇಳಿದರು.
ಸಲಿಂಗ ವಿವಾಹಗಳು ದೇಶದಲ್ಲಿ ಕಾನೂನುಬದ್ಧವಾಗಿರುವ ಬಗ್ಗೆ ತಮಗೇನೂ ಸಮಸ್ಯೆಯಿಲ್ಲ ಎಂದು ಹೇಳಿದ ಟ್ರಂಪ್, ಈ ವಿಚಾರದಲ್ಲಿ ಬೇರೆ ನಿರ್ಧಾರ ಕೈಗೊಳ್ಳಲು ಸುಪ್ರೀಂ ಕೋರ್ಟ್ ನ್ಯಾಯಾಧೀಶರುಗಳನ್ನು ನೇಮಕ ಮಾಡುವುದಿಲ್ಲ ಎಂದು ಹೇಳಿದರು.
ಇಸ್ಲಾಮಿಕ್ ಸ್ಟೇಟ್ ವಿರುದ್ಧದ ಹೋರಾಟದ ಬಗ್ಗೆ ತನಗೆ ಅಮೆರಿಕ ಜನರಲ್ ಗಳಿಗಿಂತ ಹೆಚ್ಚು ಗೊತ್ತಿದೆ ಎಂದು ಟ್ರಂಪ್ ಚುನಾವಣೆಗೆ ಮುಂಚೆ ಹೇಳಿ ಎಲ್ಲರ ಹುಬ್ಬೇರಿಸಿದ್ದರೆ ಈಗಲೂ ಅವರು ಅದನ್ನೇ ಪುನರುಚ್ಚರಿಸಿದ್ದಾರೆ.





