ದೇವರನ್ನೂ ಬಿಡದೆ ಕಾಡಿದ ನೋಟು ರದ್ದತಿ !
.jpg)
ಚೆನ್ನೈ, ನ. 14: ನೋಟು ಅಮಾನ್ಯಗೊಳಿಸಿದ ಕ್ರಮ ಕೇವಲ ಮನುಷ್ಯರಿಗೆ ಮಾತ್ರವಲ್ಲ ದೇವರಿಗೂ ತೊಂದರೆಯನ್ನೇ ನೀಡಿದೆ. ಹಳೆ ನೋಟುಗಳನ್ನು ಹಿಂಪಡೆದ ಪರಿಣಾಮ ತಮಿಳ್ನಾಡಿನ ಒಂದು ದೇವಳದಲ್ಲಿ ಹರಕೆಯಾಗಿ 44 ಲಕ್ಷರೂಪಾಯಿಯ 500,1000 ರೂಪಾಯಿ ನೋಟುಗಳು ಲಭಿಸಿವೆ ಎಂದು ವರದಿಯಾಗಿದೆ.
ವೆಳ್ಳೂರಿನ ಶತಮಾನಗಳ ಹಳೆಯ ಜಲಕಂಠೇಶ್ವರ್ ದೇವಾಲಯಕ್ಕೆ ಈ ಬೃಹತ್ ಮೊತ್ತದ ಹರಿಕೆ ಲಭಿಸಿದೆ. ಒಬ್ಬನೇ ವ್ಯಕ್ತಿ ಹೀಗೆ ಹರಿಕೆ ಸಲ್ಲಿಸಿರುವನೇ ಅಥವಾ ಒಂದಕ್ಕೂ ಹೆಚ್ಚು ವ್ಯಕ್ತಿಗಳು ಈ ಮೊತ್ತವನ್ನು ಹರಿಕೆಯಾಗಿ ನೀಡಿದರೇ ಎಂಬುದು ಸ್ಪಷ್ಟವಾಗಿಲ್ಲ. ಏನಿದ್ದರೂ ದೇವಳಕ್ಕೆ ಈವರೆಗೆ ಹರಕೆಯಾಗಿ ಸಿಕ್ಕಿರುವುದರಲ್ಲೇ ಭಾರಿ ಮೊತ್ತ ಇದೆಂದ ದೇವಳ ಕಾರ್ಯದರ್ಶಿ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿಯಿಡಲು ದೇವಳದ ಅಧಿಕಾರಿಗಳು ನಿರ್ಧರಿಸಿದ್ದಾರೆ. ಆದರೆ 2.5ಲಕ್ಷಕ್ಕಿಂತ ಹೆಚ್ಚು ಹಣವನ್ನು ಬ್ಯಾಂಕಿನಲ್ಲಿಡುವುದಾದರೆ ವರಮಾನ ತೆರಿಗೆ ಕೊಡಬೇಕಾಗುತ್ತದೆ. ಆದ್ದರಿಂದ ದೇವಳದಲ್ಲಿ ಸಿಕ್ಕಿದ ಹಣದ ಗತಿಯೇನು ಎಂಬ ಶಂಕೆ ತಲೆದೋರಿದೆ.
ಹಳೆ ನೋಟುಗಳು ಅಮಾನ್ಯವಾದ ನೆಲೆಯಲ್ಲಿ ಕಳ್ಳನೋಟು ಉಪಯೋಗಿಸಿ ಬೇರೇನು ಮಾಡಲು ಹೆದರಿದ ಹಲವರು ನೋಟುಗಳನ್ನು ಸುಡುತ್ತಿದ್ದಾರೆ. ಕೆಲವರು ಕಸದ ರಾಶಿಗೆ ಹಾಕುತ್ತಿದ್ದಾರೆ. ಆದರೆ ಕೊನೆಯ ದಾಳವಾಗಿ ಅಮಾನ್ಯ ನೋಟುಗಳನ್ನು ದೇವಳದ ಹುಂಡಿಗೆ ಹಾಕಿ ಪುಣ್ಯಗಳಿಸುವ ಯತ್ನವೂ ನಡೆಯುತಿದೆ. ಭಾರಿಮೊತ್ತದ ನೋಟುಗಳು ಗಂಗಾನದಿಯಲ್ಲಿ ಹರಿಯುತ್ತಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು.







