ಗ್ರೀನ್‌ವ್ಯೂ ಮಕ್ಕಳ ಹಬ್ಬದಲ್ಲಿ ದಿನ ಪೂರ್ತಿ ಸಂಭ್ರಮ
ಸುಳ್ಯದಲ್ಲಿ ಅರ್ಥಪೂರ್ಣ ಮಕ್ಕಳ ದಿನಾಚರಣೆ
.jpg)
ಸುಳ್ಯ, ನ.14: ಸುಳ್ಯದಲ್ಲಿ ಈ ಬಾರಿಯ ಮಕ್ಕಳ ದಿನಾಚರಣೆಯು ಮಕ್ಕಳೇ ಸಂಭ್ರಮಿಸುವ ಮೂಲಕ ಅರ್ಥಪೂರ್ಣವಾಗಿ ಅಚರಣೆಗೊಂಡಿತು. ಸುಳ್ಯದ ಗ್ರೀನ್‌ವ್ಯೆ ಶಿಕ್ಷಣ ಸಂಸ್ಥೆಯಲ್ಲಿ ಮೋಡೆಲ್ ಎಜ್ಯುಕೇಶನ್ ಟ್ರಸ್ಟ್ ಸುಳ್ಯ, ಸ್ವಾಗತ ಸಮಿತಿ ಗ್ರೀನ್ ವ್ಯೆ ಮಕ್ಕಳ ಹಬ್ಬದ ಆಶ್ರಯದಲ್ಲಿ ನಡೆದ ಗ್ರೀನ್ ವ್ಯೆ ಮಕ್ಕಳ ಹಬ್ಬದಲ್ಲಿ ದಿನಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಮಕ್ಕಳು ಖುಷಿಪಟ್ಟರು.
ಮಕ್ಕಳ ದಿನಾಚರಣೆಯ ಅಂಗವಾಗಿ ನಡೆದ ಮಕ್ಕಳ ಹಬ್ಬವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಉದ್ಘಾಟಿಸಿ ಮಾತನಾಡಿ, ಮಕ್ಕಳ ಬೌದ್ಧಿಕ ವಿಕಸನವಾಗಬೇಕಾದರೆ ಅವರಿಗೆ ಖುಷಿ ಪಡುವ ಸಂಗತಿಗಳನ್ನು ಹೆಚ್ಚು ನೀಡಬೇಕು. ಆ ಕಾರ್ಯ ಮಕ್ಕಳ ಹಬ್ಬದ ಮೂಲಕ ಆಗುತ್ತಿದೆ ಎಂದರು. ನ.ಪಂ ಅಧ್ಯಕ್ಷೆ ಶೀಲಾವತಿ ಮಾಧವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನ.ಪಂ. ಮಾಜಿ ಅಧ್ಯಕ್ಷ ಎಂ.ವೆಂಕಪ್ಪಗೌಡ, ಎಸ್.ಸಂಶುದ್ಧೀನ್, ಎನ್.ಎ.ರಾಮಚಂದ್ರ, ನ.ಪಂ. ಸದಸ್ಯರಾದ ಕೆ.ಎಸ್.ಉಮ್ಮರ್, ಕೆ.ಗೋಕುಲ್‌ದಾಸ್, ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೈ, ಎಪಿಎಂಸಿ ಸದಸ್ಯ ಆದಂ ಹಾಜಿ ಕಮ್ಮಾಡಿ, ದ.ಕ. ಜಿಲ್ಲಾ ಜೇನು ಸೊಸೈಟಿ ಅಧ್ಯಕ್ಷ ಚಂದ್ರಾ ಕೋಲ್ಚಾರ್, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಐ.ಇಸ್ಮಾಯಿಲ್, ಅಬ್ಬಾಸ್ ಹಾಜಿ ಕಟ್ಟೆಕಾರ್, ಕೆ.ಎಂ.ಹಮೀದ್, ಆರ್.ಕೆ ಮಹಮ್ಮದ್, ಅಬ್ದುಲ್ ಮಜೀದ್ , ಶಾಲಾ ಮುಖ್ಯೋಪಾಧ್ಯಾಯ ಅಮರನಾಥ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಸಂಚಾಲಕ ಬಿ.ಎಸ್.ಶರೀಫ್ ಸ್ವಾಗತಿಸಿದರು. ಕಾರ್ಯಕ್ರಮದ ರೂವಾರಿ, ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎಂ.ಮುಸ್ತಫಾ ಪ್ರಸ್ತಾವನೆಗೈದರು. ಶಿಕ್ಷಕಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.
ಮಕ್ಕಳ ಹಬ್ಬದ ಅಂಗವಾಗಿ ವಿವಿಧ ಕ್ರೀಡೆ, ಕಲೆ, ಸಾಂಸ್ಕೃತಿಕ ಪ್ರದರ್ಶನಗಳು ನಡೆದವು. ವಿವಿಧ ಅಕಾಡೆಮಿಗಳ ಪ್ರಾಯೋಜಕತ್ವದಲ್ಲಿ ಕಲೆ, ಸಾಹಿತ್ಯ, ಸಾಂಸ್ಕೃತಿಕ ಮತ್ತು ಜಾನಪದ ಪ್ರದರ್ಶನ ನಡೆಯಿತು. ವಿಜ್ಞಾನ, ತಂತ್ರಜ್ಞಾನದ ಪ್ರೊಜೆಕ್ಟ್‌ಗಳು, ಏರ್‌ಶೋ ಸೇರಿದಂತೆ 24 ಪ್ರಕಾರಗಳ ಪ್ರದರ್ಶನ ನಡೆಯಿತು. ಬೃಹತ್ ಪ್ರಾಚ್ಯವಸ್ತುಗಳ ಸಂಗ್ರಹಾಲಯ ಮಕ್ಕಳಿಗೆ ಖುಷಿ ನೀಡಿತು. ಜಗತ್ತಿನ ಏಳು ಅದ್ಭುತಗಳ ಮತ್ತು ಭಾರತದ ಐತಿಹಾಸಿಕ ಸ್ಥಳಗಳ ಮೋಡೆಲ್‌ಗಳನ್ನು ರಚಿಸಿ ಅದರ ಮುಂಭಾಗದಲ್ಲಿ ನಿಂತು ಮಕ್ಕಳಿಗೆ ಫೋಟೊ ತೆಗೆಯುವ ಅವಕಾಶ ನೀಡಲಾಗಿತ್ತು. ವಿದ್ಯಾರ್ಥಿಗಳ ದಂತ ತಪಾಸಣೆ ಮತ್ತು ಉಚಿತ ಡೆಂಟಲ್ ಕಿಟ್ ವಿತರಣೆ ನಡೆಯಿತು. ಉಚಿತ ಆರೋಗ್ಯ ತಪಾಸಣೆ, ಆರೋಗ್ಯ ಜಾಗೃತಿ ಮಾಹಿತಿ ಕಾರ್ಯಕ್ರಮ ಕೂಡಾ ನಡೆಯಿತು. ಮಕ್ಕಳ ಹಬ್ಬದ ನಡುವೆ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ, ಪ್ರತಿಬಾ ಪುರಸ್ಕಾರ, ಪ್ರತಿಭೆಗಳ ಪ್ರದರ್ಶನ ನಡೆಯಿತು.
ಮಕ್ಕಳ ದಿನ ಜನಿಸಿದವರ ಹುಟ್ಟುಹಬ್ಬದ ಸಾಮೂಹಿಕ ಆಚರಣೆ, ಅವಳಿ-ಜವಳಿ ಸ್ಪರ್ಧೆ ರಂಗು ತಂದಿತು. ಅಂತಾರಾಷ್ಟ್ರೀಯ ಖ್ಯಾತಿಯ ಬೆಂಗಳೂರಿನ ಪ್ರಹ್ಲಾದ್ ಆಚಾರ್ಯರಿಂದ ಮಾತನಾಡುವ ಗೊಂಬೆ, ಅದ್ಭುತ ಮನರಂಜನೆಯ ಶಾಡೋ ಪ್ಲೇ, ಶ್ರೀಧರ್ ಜಾದೂಗಾರ್ ವಿಸ್ಮಯ ಜಗತ್ತು, ಜಾನಪದ ಕ್ರೀಡೆಗಳಾದ ಲಗೋರಿ, ಬೆರ್ಚೆಂಡ್, ನೊಂಡಿ, ಜುಬಿಲಿ ಮೊದಲಾದ ಸ್ಪರ್ಧೆಗಳು, ಮಕ್ಕಳ ವಿನೋದಕ್ಕೆ ಮಿನಿ ಅಮ್ಯೂಸ್‌ಮೆಂಟ್ ಪಾರ್ಕ್, ಜಾನಪದ ಕ್ರೀಡೋತ್ಸವ, ಆಹಾರಮೇಳ ಹೀಗೆ ವೈವಿಧ್ಯಮ ಕಾರ್ಯಕ್ರಮಗಳು ಮಕ್ಕಳ ಹಬ್ಬದಲ್ಲಿತ್ತು. ಎರಡು ಕುದುರೆಗಳನ್ನು ವಿದ್ಯಾರ್ಥಿಗಳ ಸವಾರಿಗಾಗಿ ತರಲಾಗಿತ್ತು. ಸುಳ್ಯ ತಾಲೂಕಿನ ವಿವಿಧ ಶಾಲೆಗಳ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಮಕ್ಕಳ ಹಬ್ಬದಲ್ಲಿ ಬಾಗವಹಿಸಿ ಸಂಭ್ರಮಿಸಿದರು







