ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೊರಗರಿಂದ ಅಹೋರಾತ್ರಿ ಧರಣಿ

ಉಡುಪಿ, ನ.14: ಐಟಿಡಿಪಿ ಇಲಾಖೆಯಿಂದ ತೀವ್ರ ಅಸ್ವಸ್ಥ ಕಾಯಿಲೆ ಗಳಿಗೆ ತುತ್ತಾದ ಕೊರಗ ಸಮುದಾಯದ ರೋಗಿಗಳ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚದ ನೇರ ಪಾವತಿ ವ್ಯವಸ್ಥೆ ನಿಲ್ಲಿಸಿರುವುದನ್ನು ತಕ್ಷಣವೇ ಪುನರ್ ಆರಂಭಿಸ ಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕೊರಗರ ಸಮಿತಿ ವತಿಯಿಂದ ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಇಂದಿನಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ.
ಕೊರಗ ಸಮುದಾಯಕ್ಕೆ ಪೌಷ್ಠಿಕ ಆಹಾರ ಪೂರೈಕೆ, ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚ ಭರಿಸುವ ವ್ಯವ್ಯಸ್ಥೆ, ಹಾಡಿಗಳಲ್ಲಿ ಟ್ಯೂಷನ್ ಕೇಂದ್ರ ಸ್ಥಾಪನೆ, ಆಸ್ಪತ್ರೆಗಳಲ್ಲಿ ಕೊರಗ ಸಮುದಾಯದ ಆರೋಗ್ಯ ಪ್ರೇರಕಿಯರ ಕೆಲಸ, ಕುಡಿತ ದುಶ್ಚಟಗಳನ್ನು ಬಿಡಿಸುವ ಮತ್ತು ಮಕ್ಕಳ ಬೇಸಿಗೆ ಶಿಬಿರ, ಟ್ಯುಟೋರಿಯಲ್ ಗಳ ಮೂಲಕ ದೂರ ಶಿಕ್ಷಣ ಕಾರ್ಯಕ್ರಮ, ಎಸ್ಸೆಸೆಲ್ಸಿ ಮಕ್ಕಳಿಗೆ ಪರೀಕ್ಷಾ ಪೂರ್ವ ತರಬೇತಿ, ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ಸೇರಿದಂತೆ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿತ್ತು.
ಆದರೆ ಈ ವರ್ಷದಿಂದ ಐಟಿಡಿಪಿ ಇಲಾಖೆಯು ಮೂಲನಿವಾಸಿ ಯೋಜನೆಯ ಹಣ ಖರ್ಚಾಗಿದೆ ಎಂಬ ಸಬೂಬು ಹೇಳಿ ಈ ವರ್ಷದಿಂದ ಈ ಎಲ್ಲ ಕಾರ್ಯಕ್ರಮಗಳನ್ನು ನಿಲ್ಲಿಸಿ ಬಿಟ್ಟಿದೆ. ಇದು ಇಡೀ ಕೊರಗ ಸಮು ದಾಯಕ್ಕೆ ಕಳವಳಕಾರಿಯಾದ ಸಂಗತಿಯಾಗಿದೆ ಎಂದು ಸಮಿತಿಯ ಅಧ್ಯಕ್ಷ ಬೊಗ್ರ ತಿಳಿಸಿದ್ದಾರೆ.
ಈ ಬಗ್ಗೆ ಹಲವು ಬಾರಿ ಸರಕಾರದ ಗಮನ ಸೆಳೆದರೂ ಈವರೆಗೆ ಯಾವುದೇ ರೀತಿ ಸ್ಪಂದನೆ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಮಾಡು-ಮಡಿ ಹೋರಾಟಕ್ಕೆ ಸಿದ್ಧವಾಗಿ ಈ ಅಹೋರಾತ್ರಿ ಧರಣಿಯನ್ನು ಆರಂಭಿಸಲಾಗಿದೆ. ಜಿಲ್ಲಾಡಳಿತ ಹಾಗೂ ಜಿಲ್ಲಾಉಸ್ತುವಾರಿ ಸಚಿವರು ಇದಕ್ಕೆ ಸ್ಪಂದಿಸಿ, ವಿಶೇಷ ಅನುದಾನ ತಯಾರಿಸಿ ಎಲ್ಲ ಗುಣಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮತ್ತೆ ಮುಂದುವರಿಸುವವರೆಗೆ ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.
ಧರಣಿಯಲ್ಲಿ ಸಮಿತಿಯ ಮಾಜಿ ಅಧ್ಯಕ್ಷೆ ಸುಶೀಲಾ ನಾಡ, ಮುಖಂಡರಾದ ಅಮ್ಮಣ್ಣಿ ಚೋರಾಡಿ, ಪುತ್ರ ಹೆಬ್ರಿ, ಸಂಜೀವ ಬಾರಕೂರು, ಶಂಕರ ಸಿದ್ಧಾಪುರ, ನೀಲು ಹೊಸಂಗಡಿ ಮೊದಲಾದವರು ಉಪಸ್ಥಿತರಿದ್ದರು







