ಸೋನಿಯಾ ಕುಟುಂಬದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಲಕ್ಕೊ, ನ.14: ‘ಪಂಡಿತ್ ನೆಹರೂರವರೇಕ ನಿಮ್ಮ ಕುಟುಂಬ ಹಾಗೂ ಪಕ್ಷ ನನ್ನನ್ನು ದೂಷಿಸುತ್ತಿವೆ. ಆದರೆ, ನಿಮ್ಮ ಹುಟ್ಟು ಹಬ್ಬವಾಗಿರುವ ನ.14ರಂದು ನಾನು, ನಿಮ್ಮ ಕಾಲದಿಂದಲೂ ಬಾಕಿಯುಳಿಸಿರುವ ಕೆಲಸವನ್ನು ಪೂರೈಸುವುದಕ್ಕಾಗಿ ನಾನಿಲ್ಲಿದ್ದೇನೆ’ ಎಂದು ದೇಶದ ಪ್ರಥಮ ಪ್ರಧಾನಿಯನ್ನು ಉಲ್ಲೇಖಿಸುವ ಮೂಲಕ ಕಾಂಗ್ರೆಸ್ ಹಾಗೂ ಅದರ ಪ್ರಥಮ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಟಿ ಬೀಸಿದ್ದಾರೆ.
ನಿನ್ನೆ ಗೋವಾದಲ್ಲಿ ಮಾಡಿದ್ದ ಭಾವನಾತ್ಮಕ ಭಾಷಣವನ್ನು ಇಂದು ಉತ್ತರಪ್ರದೇಶದಲ್ಲಿ ಮುಂದುವರಿಸಿದ ಅವರು, ದೊಡ್ಡ ನೋಟು ರದ್ದತಿಯ ಸರಕಾರದ ನಿರ್ಧಾರವನ್ನು ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ತಡೆಯುವ ಪ್ರಯತ್ನವೆಂದು ಟೀಕಿಸಿರುವ ಕಾಂಗ್ರೆಸ್ ಪಕ್ಷವನ್ನು ಹಿಗ್ಗಾಮುಗ್ಗಾ ಝಾಡಿಸಿದರು.
ಕಪ್ಪು ಹಣ ಅಥವಾ ಅಘೋಷಿತ ಸಂಪತ್ತಿನ ವಿರುದ್ಧ ಹೋರಾಟಕ್ಕಾಗಿ ತಾನು ಕೈಗೊಂಡಿರುವ ನಿರ್ಧಾರವನ್ನು ಬೆಂಬಲಿಸುವಂತೆ ಹಾಗೂ ಕೈಗಳನ್ನೆತ್ತಿ ಮೆಚ್ಚುಗೆ ಸೂಚಿಸಿ ಹರಸುವಂತೆ ಮೋದಿ ಘಾಝಿಪುರ ರ್ಯಾಲಿಯಲಲಿ ಸೇರಿದ್ದ ಜನರನ್ನು ಮತ್ತೆ ಮತ್ತೆ ವಿನಂತಿಸಿದರು. ಪ್ರತಿ ಸಲವೂ ಜನರು ಅವರೆಂದಂತೆ ಮಾಡಿದಾಗ ತನಗೆ ಕೆಲಸ ಮುಂದುವರಿಸುವಂತೆ ಬಡ ಜನರು ನೀಡಿರುವ ಆದೇಶ ಇದಾಗಿದೆ ಎಂದು ಮೋದಿ ಹೇಳಿದರು.
ಭಾರತದ ಬಡವರಿಗೆ ಸೇರಿರುವ ಹಣವನ್ನು ಲೂಟಿ ಮಾಡಲು ತಾನು ಯಾರಿಗೂ ಅವಕಾಶ ನೀಡುವುದಿಲ್ಲ. ಹೌದು! ತನ್ನ ವಿರುದ್ಧವಿರುವವರು ಬಲಿಷ್ಠರೆಂಬುದು ತನಗೆ ತಿಳಿದಿದೆ. ಆದರೆ, ತಾನವರಿಗೆ ಅಂಜುವುದಿಲ್ಲ. ತಾನು ಸತ್ಯ ಹಾಗೂ ಪ್ರಾಮಾಣಿಕತೆಯ ದಾರಿಯಿಂದ ವಿಚಲಿತನಾಗುವುದಿಲ್ಲವೆಂದು ಮೋದಿ ಘೋಷಿಸಿದರು.
ಕಾಂಗ್ರೆಸ್, ಕೇವಲ ಅಧಿಕಾರದಲ್ಲುಳಿಯುವುದಕ್ಕಾಗಿ ಇಡೀ ದೇಶವನ್ನು 19 ತಿಂಗಳುಗಳ ಕಾಲ ಕಾರಾಗೃಹವನ್ನಾಗಿ ಪರಿವರ್ತಿಸಿತೆಂದು 1970ರಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದುದನ್ನು ಹಲವು ಸಲ ಉಲ್ಲೇಖಿಸಿದ ಪ್ರಧಾನಿ, ಭ್ರಷ್ಟಾಚಾರದ ವಿರುದ್ಧ ಸಮರಕ್ಕೆ ತಾನು 50 ದಿನಗಳ ಅವಕಾಶ ಕೇಳುತ್ತಿದ್ದೇನೆ ಎಂದರು.
ಜನರಿಗಾಗಿರುವ ತೊಂದರೆಯಿಂದ ತನಗೆ ನೋವಾಗಿದೆ. ಅದರಿಂದ ಹೊರ ಬರಲು ಜನರಿಗೆ ಸಹಾಯ ಮಾಡುವುದಕ್ಕಾಗಿ ತಾನು ದಣಿವರಿಯದೆ ದುಡಿಯುತ್ತಿದ್ದೇನೆಂದು ಅವರು ಜನರಿಗೆ ಭರವಸೆ ನೀಡಿದರು.
ಕೆಲವೇ ದಿನಗಳಲ್ಲಿ ಅಡಚಣೆ ನಿವಾರಣೆಯಾಗಲಿದೆ. ಆದರೆ, ಅದರ ಲಾಭವು ದೀರ್ಘಾವಧಿಯದಾಗಲಿದೆಯೆಂದು ಮೋದಿ ಹೇಳಿದರು.
ಹೌದು ತನ್ನ ನಿರ್ಧಾರಗಳು ಕಡಕ್(ಕಠಿಣ) ಆಗಿರುತ್ತವೆ. ತಾನು ಸಣ್ಣವನಿದ್ದಾಗ ಬಡವರು ತನ್ನಲ್ಲಿ ಕಡಕ್ ಚಹಾ ಕೇಳುತ್ತಿದ್ದರೆಂದು ಅವರು ತಿಳಿಸಿದಾಗ, ಸಭೆಯಲ್ಲಿ ಹರ್ಷೋದ್ಗಾರದ ತೆರೆಯೆದ್ದಿತು.







