ತಲವಾರು ಸಹಿತ ಇಬ್ಬರು ದುಷ್ಕರ್ಮಿಗಳ ಸೆರೆ

ಮಂಗಳೂರು, ನ.14: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ತೌಡುಗೋಳಿಯಲ್ಲಿ ಸೋಮವಾರ ಮುಂಜಾನೆ ನಾಕಾಬಂಧಿ ನಡೆಸುತ್ತಿದ್ದ ಪೊಲೀಸರು ತಲವಾರು ಸಹಿತ ಇಬ್ಬರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮುಡಿಪು ಸಮೀಪದ ಧನುಷ್ ಮತ್ತು ಶರತ್ ಎಂದು ಗುರುತಿಸಲಾಗಿದೆ. ಬೈಕ್‌ನಲ್ಲಿ ಚಲಿಸುತ್ತಿದ್ದ ಇವರನ್ನು ನಾಕಾಬಂಧಿ ನಡೆಸುತ್ತಿದ್ದ ಪೊಲೀಸರು ತೌಡುಗೋಳಿಯಲ್ಲಿ ತಡೆದು ವಿಚಾರಣೆ ನಡೆಸಿದರು. ಸಮರ್ಪಕ ಉತ್ತರ ನೀಡದ ಕಾರಣ ಶಂಕೆಗೊಂಡ ಪೊಲೀಸರು ತಪಾಸಣೆಗೊಳಪಡಿಸಿದಾಗ ತಲವಾರು ಪತ್ತೆಯಾಗಿದೆ. ತಕ್ಷಣ ಇಬ್ಬರನ್ನೂ ವಶಕ್ಕೆ ತೆಗೆದುಕೊಂಡ ಪೊಲೀಸರು ಮತ್ತಷ್ಟು ವಿಚಾರಣೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಒಪ್ಪಿಸಿದರು.
ಈ ಬಗ್ಗೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಮಂಗಳೂರು ದಕ್ಷಿಣ ಉಪ ವಿಭಾಗದ ಪೊಲೀಸ್ ಸಹಾಯಕ ಆಯುಕ್ತೆ ಶ್ರುತಿ, ಕೊಣಾಜೆ ಪೊಲೀಸರು ರಾತ್ರಿ ಗಸ್ತು ವೇಳೆ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇವರು ಯಾವುದೋ ದುಷ್ಕೃತ್ಯ ಎಸಗಲು ಸಂಚು ರೂಪಿಸಿದ್ದು, ತನಿಖೆ ಮುಂದುವರಿದಿದೆ. ಕೈರಂಗಳದ ಬಳಿ ಸೋಮವಾರ ಸಂಜೆ ಮದ್ರಸ ವಿದ್ಯಾರ್ಥಿಗೆ ನಡೆದ ಚೂರಿ ಇರಿತ ಪ್ರಕರಣದ ಆರೋಪಿಯನ್ನೂ ಬಂಧಿಸಲಾಗುವುದು’ ಎಂದು ತಿಳಿಸಿದ್ದಾರೆ.





