ದಲಿತ-ಒಬಿಸಿ ಸಂಘಟನೆಗಳಿಂದ ಸಂವಿಧಾನ ರ್ಯಾಲಿ
ಮುಂಬೈ, ನ.14: ಎಸ್ಸಿ-ಎಸ್ಟಿ ದೌರ್ಜನ್ಯ (ತಡೆ) ಕಾಯ್ದೆಯನ್ನು ರದ್ದುಗೊಳಿಸಬೇಕೆಂಬ ಮರಾಠಾ ಸಮುದಾಯದ ಬೇಡಿಕೆಯ ಹಿನ್ನೆಲೆಯಲ್ಲಿ. ಕೆಲವು ದಲಿತ ಹಾಗೂ ಪಬಿಸಿ ಸಂಘಟನೆಗಳು ಈ ಕಾಯ್ದೆಯನ್ನು ಬಲಪಡಿಸುವುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಡಿ.24ರಂದು ‘ಸಂವಿಧಾನ ರ್ಯಾಲಿ’ಯನ್ನು ನಡೆಸಲಿವೆ.
ಸಾಂತಾಕ್ರೂಸ್ ಪೂರ್ವದ ಕಲಿನಾದ ಭೀಂಛಾಯಾ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಸಭೆಯೊಂದರಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತೆಂದು ಹೇಳಿಕೆಯೊಂದು ತಿಳಿಸಿದೆ.
ಸಭೆಯಲ್ಲಿ ಕೆಲವು ವಕೀಲರು, ವೈದ್ಯರು, ಪ್ರೊಫೆಸರ್‌ಗಳು ಹಾಗೂ ನಿವೃತ್ತ ಸರಕಾರಿ ಅಧಿಕಾರಿಗಳು ಭಾಗವಹಿಸಿ, ರ್ಯಾಲಿಗೆ ಬೆಂಬಲ ಸೂಚಿಸಿದ್ದಾರೆ.
ಸಂವಿಧಾನ ರ್ಯಾಲಿಗೆ ಪೂರ್ವಭಾವಿಯಾಗಿ ನ.26ರಂದು ಬೈಕ್ ಹಾಗೂ ಕಾರ್ ರ್ಯಾಲಿಯೊಂದನ್ನು ನಡೆಸಲಾಗುವುದು. ಈ ರ್ಯಾಲಿಯು ಕೇಂದ್ರ ಮುಂಬೈಯ ದಾದರ್‌ನಲ್ಲಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸ್ಮಾರಕ ‘ಚೈತ್ಯ ಭೂಮಿ’ಯಲ್ಲಿ ಸಮಾಪನಗೊಳ್ಳಲಿದೆ. ಡಿ.11ರಂದು ಮುಂಬೈಯಲ್ಲಿ ಜಾಗೃತಿ ಸಮಾವೇಶವೊಂದು ನಡೆಯಲಿದೆ. ಅದರಲ್ಲಿ ದಲಿತ ಹಾಗೂ ಒಬಿಸಿ ಸಮುದಾಯದವರಿಗೆ ಅವರ ಹಕ್ಕುಗಳ ಹಾಗೂ ಸಂವಿಧಾನ ಕುರಿತು ಜಾಗೃತಿ ಮೂಡಿಸಲಾಗುವುದೆಂದು ಹೇಳಿಕೆ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಪ್ರಬಲವಾಗಿರುವ ಮರಾಠಾ ಸಮುದಾಯವು ಜುಲೈಯಲ್ಲಿ ಅಹ್ಮದ್‌ನಗರ ಜಿಲ್ಲೆಯ ಕೋಪಾರ್ಡಿಯಲ್ಲಿ ಹುಡುಗಿಯೊಬ್ಬಳ ಅತ್ಯಾಚಾರ ಹಾಗೂ ಕೊಲೆ ನಡೆದ ಬಳಿಕ, ರಾಜ್ಯದ ವಿವಿಧ ಪಟ್ಟಣಗಳಲ್ಲಿ ವೌನ ಮೆರವಣಿಗೆ ನಡೆಸುತ್ತಿದೆ.
ಎಸ್ಸಿ-ಎಸ್ಟಿ ದೌರ್ಜನ್ಯ (ತಡೆ) ಕಾಯ್ದೆಯು ಸಾರಾಸಗಟಾಗಿ ದುರ್ಬಳಕೆಯಾಗುತ್ತದೆ. ಆದುದರಿಂದ ಅದನ್ನು ರದ್ದುಪಡಿಸಬೇಕು. ಮರಾಠರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕೆಂದು ಸಮುದಾಯದ ನಾಯಕರು ಆಗ್ರಹಿಸುತ್ತಿದ್ದಾರೆ.







