ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಮರಳಿಸಿ ಪ್ರಾಮಾಣಿಕತೆ ಮೆರೆದ ಹಮೀದ್

ಬಂಟ್ವಾಳ, ನ.14: ಪರಸ್ಪರ ಸೌಹಾರ್ದ, ಮಾನವೀಯತೆ ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಇಂತಹ ಆರೋಪಕ್ಕೆ ಅಲ್ಲೊಂದು ಇಲ್ಲೊಂದು ಘಟನೆಗಳು ನಡೆಯುತ್ತವೆ. ಇಲ್ಲಿ ಆಗಿರುವುದೂ ಅಂತಹುದೇ ಒಂದು ಘಟನೆ. ವ್ಯಕ್ತಿಯೋರ್ವರು ತನಗೆ ದಾರಿಯಲ್ಲಿ ದೊರೆತ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಅದರ ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ನೀರಪಾದೆ ಬಳಿಯ ನಿವಾಸಿ ಹಮೀದ್ ಎಂಬವರೇ ಪ್ರಾಮಾಣಿಕತೆ ಮೆರೆದ ವ್ಯಕ್ತಿ.
ರವಿವಾರ ಬೆಳಗ್ಗೆ ಯಾವುದೋ ಕೆಲಸದ ನಿಮಿತ್ತ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಹಮೀದ್ ಅವರಿಗೆ ಪ್ಲಾಸ್ಟಿಕ್ ಕವರೊಂದು ಲಭಿಸಿತ್ತು. ಕವರ್‌ನ್ನು ಬಿಡಿಸಿ ನೋಡಿದಾಗ ಅವರಿಗೆ ಶಾಕ್ ಕಾದಿತ್ತು. ಯಾಕೆಂದರೆ ಅದರಲ್ಲಿ ಇದ್ದುದು ಬರೋಬ್ಬರಿ 45 ಪವನ್ ತೂಕದ ಚಿನ್ನಾಭರಣಗಳು. ಆಭರಣಗಳಲ್ಲಿ ‘ನಾಗ’ನ ಚಿತ್ರ ಇದ್ದುದನ್ನು ಕಂಡು ಚಿನ್ನಾಭರಣಗಳನ್ನು ಅದರ ವಾರಸುದಾರರಿಗೆ ಒಪ್ಪಿಸಬೇಕೆಂದು ನಿರ್ಧರಿಸಿದರು. ಕೂಡಲೇ ಬಾಳ್ತಿಲ ಗ್ರಾಮ ಪಂಚಾಯತ್ ಸದಸ್ಯ ಶಿವಕುಮಾರ್‌ರ ಬಳಿ ಬಂದು ನಡೆದ ವಿಚಾರವನ್ನು ತಿಳಿಸಿ, ವಾರಸುದಾರರಿಗೆ ಒಪ್ಪಿಸುವಂತೆ ಮನವಿ ಮಾಡಿಕೊಂಡರು. ಶಿವಕುಮಾರ್ ಅವರು ಕೂಡಲೇ ಹಮೀದ್‌ರೊಂದಿಗೆ ಬಂಟ್ವಾಳ ನಗರ ಠಾಣೆಗೆ ಆಗಮಿಸಿ ಚಿನ್ನಾಭರಣಗಳನ್ನು ಪೊಲೀಸರಿಗೊಪ್ಪಿಸುವಂತೆ ಕೋರಿದ್ದರು.
ಇತ್ತ ಸೋಮವಾರ ಪಾಣೆಮಂಗಳೂರಿನ ನರಸಿಂಹ ಪ್ರಭು ಎಂಬುವರು ಚಿನ್ನಾಭರಣ ಕಳೆದುಕೊಂಡ ಕುರಿತು ದೂರು ನೀಡಲೆಂದು ಬಂಟ್ವಾಳ ನಗರ ಠಾಣೆಗೆ ಆಗಮಿಸಿದ್ದರು. ಹಮೀದ್ ಮತ್ತು ಶಿವಕುಮಾರ್ ಅವರು ತಂದೊಪ್ಪಿಸಿರುವ ಆಭರಣಗಳು ಅವರದ್ದೇ ಎಂದು ಖಚಿತಪಡಿಸಿಕೊಂಡರು. ಕೂಡಲೇ ಹಮೀದ್ ಮತ್ತು ಶಿವಕುಮಾರ್‌ರನ್ನು ಕರೆಸಿ ಅವರ ಸಮಕ್ಷಮದಲ್ಲಿ ಚಿನ್ನಾಭರಣಗಳನ್ನು ವಾರಸುದಾರ ನರಸಿಂಹ ಪ್ರಭು ಅವರಿಗೆ ಹಸ್ತಾಂತರಿಸಲಾಯಿತು. ಧರ್ಮದ ಹೆಸರಿನಲ್ಲಿ ಕಿತ್ತಾಟ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಮರಳಿಸಿದ ಹಮೀದ್ ಅವರ ಪ್ರಾಮಾಣಿಕತೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಚಿನ್ನಾಭರಣ ಹಸ್ತಾಂತರಿಸುವ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿಸಿ.ಬಿ.ವೇದಮೂರ್ತಿ, ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ರವೀಶ್ .ಆರ್., ಬಂಟ್ವಾಳ ನಗರ ಠಾಣೆಯ ಎಸ್ಸೈ ನಂದಕುಮಾರ್ ಹಾಗೂ ಅವರ ಸಿಬ್ಬಂದಿ ಉಪಸ್ಥಿತರಿದ್ದರು.







