ಅಂತೂ ಇಂತೂ ಪ್ರಭಾವಿಗಳು ಸಾಲಿನಲ್ಲಿ ಕಂಡರು
ಸರತಿ ಸಾಲಿನಲ್ಲಿ ನಿಂತು ಹಣ ಪಡೆದ ಠಾಣಾಧಿಕಾರಿ !

ಮೊರಾದಾಬಾದ್ , ನ. 14 : 500, 1000 ರೂ ನೋಟು ರದ್ದಾದ ಬಳಿಕ ಉದ್ದುದ್ದ ಸರತಿ ಸಾಲುಗಳಲ್ಲಿ ನಿಂತು ಹೊಸ ನೋಟು ಪಡೆಯುವವರಲ್ಲಿ ಗಣ್ಯರು, ಸಿರಿವಂತರು ಕಾಣುತ್ತಿಲ್ಲ ಎಂಬುದು ಸಾಮಾನ್ಯವಾಗಿ ಕೇಳಿ ಬರುತ್ತಿರುವ ಆರೋಪ.
ಆದರೆ ಇಲ್ಲೊಬ್ಬರು ಠಾಣಾಧಿಕಾರಿಯೇ ಬಂದು ಸಾಮಾನ್ಯರ ಜೊತೆ ಸರತಿ ಸಾಲಿನಲ್ಲಿ ನಿಂತು ಬ್ಯಾಂಕಿನಲ್ಲಿ ಹಣ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಈ ಮೂಲಕ ಸಿರಿವಂತರು ಇಲ್ಲದಿದ್ದರೂ ಪ್ರಭಾವಿ ಅಧಿಕಾರಿಯೊಬ್ಬರು ಬಂದು ಜನಸಾಮಾನ್ಯರ ಜೊತೆ ನಿಂತು ಹಣ ಪಡೆಯುವ ಮೂಲಕ ಮಾದರಿ ಆಗಿದ್ದಾರೆ.
ಮೊರಾದಾಬಾದ್ ಜಿಲ್ಲೆಯ ಠಾಣಾಧಿಕಾರಿ ಸಿರಾಜುದ್ದೀನ್ ಅವರು ಬ್ಯಾಂಕ್ ಒಂದರ ಎದುರು ಇದ್ದ ಜನರ ಸರತಿ ಸಾಲಿನಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ನಿಂತು ತಮ್ಮ ಸರದಿಗಾಗಿ ಕಾದರು. ಅವರ ಸರದಿ ಬಂದಾಗ ಹಣ ಪಡೆದರು. ಇದಕ್ಕೆ ಮೊದಲು ಬ್ಯಾಂಕ್ ಅಧಿಕಾರಿಗಳು ಅವರ ಬಳಿ ಬಂದು ನೀವು ಫಾರ್ಮ್ ಭರ್ತಿ ಮಾಡಿ ಹೋಗಿ. ಹಣವನ್ನು ನಾವು ಠಾಣೆಗೆ ತಲುಪಿಸುತ್ತೇವೆ ಎಂದು ಹೇಳಿದರೂ ಸಿರಾಜುದ್ದೀನ್ ಅದನ್ನು ನಿರಾಕರಿಸಿದರು. ನನ್ನ ಹತ್ತಿರ ಇವತ್ತು ಕೇವಲ 30 ರೂ ಇದ್ದಿದ್ದರಿಂದ ನಾನು ಬಂದಿದ್ದೇನೆ. ನಾನು ಉಳಿದವರ ಜೊತೆ ಸಾಲಿನಲ್ಲೇ ನಿಂತು ಹಣ ಪಡೆಯುತ್ತೇನೆ ಎಂದು ಹೇಳಿ ಮಾದರಿಯಾದರು ಸಿರಾಜುದ್ದೀನ್.





