ನೆಲ್ಯಾಡಿ: ಸಿಡಿಲು ಬಡಿದು ವ್ಯಕ್ತಿ ಮೃತ್ಯು
.jpg)
ಉಪ್ಪಿನಂಗಡಿ, ನ.14: ಸಿಡಿಲು ಬಡಿದು ಮನೆಯಲ್ಲಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನೆಲ್ಯಾಡಿ ಗ್ರಾಮದ ಕೊಪ್ಪಮಾದೇರಿಯ ಕೊರಡೇಲು ಎಂಬಲ್ಲಿ ಸೋಮವಾರ ಸಂಜೆ ಸಂಭವಿಸಿದ್ದು, ಇದೇ ಸಂದರ್ ಅಲ್ಲಿಯೇ ಇದ್ದ ಅವರ ಪತ್ನಿ ಹಾಗೂ ತಂದೆ ಅಪಾಯದಿಂದ ಪಾರಾಗಿದ್ದಾರೆ.
ಕೊರಡೇಲು ನಿವಾಸಿ ನವೀನ್ ಕುಮಾರ್ (36) ಮೃತ ವ್ಯಕ್ತಿ. ಘಟನೆಯ ಸಂದರ್ ಅಲ್ಲೇ ಇದ್ದ ನವೀನ್ ಕುಮಾರ್ ಅವರ ತಂದೆ ಕೃಷ್ಣೇ ಗೌಡ, ಪತ್ನಿ ಪುಷ್ಪಾವತಿ ಅಪಾಯದಿಂದ ಪಾರಾಗಿದ್ದಾರೆ.
ಮೂಲತಃ ಚಿಕ್ಕಮಗಳೂರಿನವರಾದ ನವೀನ್ ಕುಮಾರ್ ಕೊರಡೇಲುವಿನಲ್ಲಿ ಪತ್ನಿ ಹಾಗೂ ತಂದೆಯೊಂದಿಗೆ ವಾಸವಿದ್ದು, ಕೂಲಿ ಕೆಲಸ ಮಾಡುತ್ತಿದ್ದರು. ಸೋಮವಾರ ಸಂಜೆ ಈ ಪರಿಸರದಲ್ಲಿ ಭಾರೀ ಸಿಡಿಲಿನೊಂದಿಗೆ ಮಳೆಯಾಗಿದ್ದು, ಕೂಲಿ ಕೆಲಸದಿಂದ ಬಂದ ನವೀನ್ ಈ ಸಂದರ್ಭ ಮನೆಯೊಳಗೆ ಕಿಟಕಿಯ ಬಳಿ ನಿಂತುಕೊಂಡಿದ್ದರು. ಆಗ ಮನೆಯೆದುರು ಸ್ಪಲ್ಪ ದೂರದಲ್ಲಿದ್ದ ಬಿದಿರ ಮೆಳೆಯೊಂದಕ್ಕೆ ಸಿಡಿಲು ಬಡಿದಿದ್ದು, ಇದರ ಆಘಾತಕ್ಕೆ ಮನೆಯೊಳಗಿದ್ದ ನವೀನ್ ಕುಮಾರ್ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರ ಪತ್ನಿ ಸಮೀಪದ ಮನೆಯವರನ್ನು ಕರೆದಿದ್ದು, ಅವರು ಬಂದು ನೋಡಿದಾಗ ನವೀನ್ ಕುಮಾರ್ ಮೃತಪಟ್ಟಿದ್ದರು. ಸಿಡಿಲು ಬಡಿದ ರಸಕ್ಕೆ ಬಿದಿರ ಮೆಳೆ ಚೂರುಚೂರಾಗಿದ್ದು, ಇವರ ಮನೆಗೂ ಹಾನಿಯಾಗಿದೆ. ವಿದ್ಯುತ್ ಉಪಕರಣಗಳು ಸುಟ್ಟು ಹೋಗಿವೆ.
ಕಳೆದ ದೀಪಾವಳಿಯ ಸಂದರ್ಭ ಈ ಪರಿಸರದಲ್ಲಿ ಎರಡು ಬಾರಿ ಸಿಡಿಲು ಬಡಿದಿತ್ತು. ಈ ಸಂದರ್ಭ ಕೃಷಿ ಹಾನಿಗೊಂಡಿತ್ತು. ಆದರೆ, ಈ ಎರಡು ಘಟನೆ ನಡೆದ ಬಳಿಕ ಕೆಲವೇ ದಿನಗಳ ನಂತರ ಬಡಿದ ಸಿಡಿಲು ಜೀವವೊಂದನ್ನು ಬಲಿಪಡೆದಿದೆ.
ಮೃತದೇಹವನ್ನು ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತರಲಾಗಿದ್ದು, ಸ್ಥಳಕ್ಕೆ ಪುತ್ತೂರು ತಹಶೀಲ್ದಾರ್ ಅನಂತ ಶಂಕರ, ಉಪತಹಶೀಲ್ದಾರ್‌ಗಳಾದ ಸದಾಶಿವ ನಾಯ್ಕ, ಶ್ರೀಧರ್ ಕೋಡಿಜಾಲ್, ಕಂದಾಯ ನಿರೀಕ್ಷಕ ಮಂಜುನಾಥ್, ಉಪ್ಪಿನಂಗಡಿ ಗ್ರಾಮ ಕರಣಿಕ ರಮಾನಂದ ಚಕ್ಕಡಿ ಆಗಮಿಸಿ, ಘಟನೆಯ ಮಾಹಿತಿ ಪಡೆದರು,.







