ನೋಟು ನಿಷೇಧದಿಂದಾಗಿ ಅಸಹನೀಯ ಸ್ಥಿತಿ: ಬ್ಯಾಂಕ್ ಯೂನಿಯನ್

ಹೊಸದಿಲ್ಲಿ,ನ.14: 500 ಮತ್ತು 1000 ರೂ.ನೋಟು ನಿಷೇಧ ಕುರಿತು ಇಂದು ಕೇಂದ್ರ ಸರಕಾರವನ್ನು ಟೀಕಿಸಿದ ಎರಡು ಪ್ರಮುಖ ಬ್ಯಾಂಕ್ ಯೂನಿಯನ್ ಗಳು, ಸರಕಾರದ ಈ ಕ್ರಮವು ದೇಶಾದ್ಯಂತ ಹಣಕಾಸು ಗೊಂದಲಕ್ಕೆ ಕಾರಣವಾಗಿದೆ ಎಂದು ಹೇಳಿವೆ.
ಸೂಕ್ತ ಯೋಜನೆ ಅಥವಾ ಸಿದ್ಧತೆಯಿಲ್ಲದೆ ನೋಟು ನಿಷೇಧ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ಬ್ಯಾಂಕುಗಳ ಸಂಘ(ಐಬಿಎ)ಕ್ಕೆ ಬರೆದಿರುವ ಪತ್ರದಲ್ಲಿ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ(ಎಐಬಿಒಎ) ಮತ್ತು ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ(ಎಐಬಿಇಎ) ಬೆಟ್ಟು ಮಾಡಿವೆ.
ರದ್ದುಗೊಂಡಿರುವ ನೋಟುಗಳನು ್ನಬದಲಿಸಿಕೊಳ್ಳಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕುಗಳಿಗೆ ಧಾವಿಸುತ್ತಿರುವುದರಿಂದ ಬ್ಯಾಂಕ್ ಶಾಖೆಗಳಲ್ಲಿ ಸಿಬ್ಬಂದಿಗಳು ಮತ್ತು ಅಧಿಕಾರಿಗಳ ಮೇಲೆ ಭಾರೀ ಕೆಲಸದ ಒತ್ತಡವಿದೆ. ಶಾಖೆಗಳಲ್ಲಿ ಗೊಂದಲದ ಸ್ಥಿತಿ ನಿರ್ಮಾಣಗೊಂಡಿದ್ದು,ಇದು ಗ್ರಾಹಕರಿಗೂ ಬ್ಯಾಂಕ್ ಸಿಬ್ಬಂದಿಗಳು ಮತ್ತು ಅಧಿಕಾರಿಗಳಿಗೂ ಅಸಹನೀಯವಾಗಿದೆ ಎಂದು ಎಐಬಿಒಎ ಪ್ರ.ಕಾರ್ಯದರ್ಶಿ ಎಸ್.ನಾಗರಾಜನ್ ಮತ್ತು ಎಐಬಿಇಎ ಪ್ರ.ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ದೈನಂದಿನ ಅಗತ್ಯಗಳಿಗಾಗಿ 100 ರೂ.ನೋಟುಗಳಿಗೆ ಭಾರೀ ಬೇಡಿಕೆಯಿದೆ,ಆದರೆ ಅವುಗಳ ತೀವ್ರ ಕೊರತೆ ಎದುರಾಗಿದೆ. ಹೆಚ್ಚಿನ ಗ್ರಾಹಕರು 2,000 ರೂ.ನೋಟನ್ನು ಸ್ವೀಕರಿಸಲು ನಿರಾಕರಿಸುತ್ತಿದ್ದಾರೆ. 100 ರೂ.ನೋಟುಗಳ ಬೇಡಿಕೆ ಮತ್ತು ಪೂರೈಕೆಯ ನಡುವೆ ಅಗಾಧ ಅಂತರವಿದೆ ಎನ್ನುವುದು ಸರಕಾರ ಮತ್ತು ರಿಜರ್ವ್ ಬ್ಯಾಂಕಿಗೂ ಗೊತ್ತಿದೆ. ಉದಾಹರಣೆಗೆ 2015-16ರಲ್ಲಿ 100 ರೂ.ಮುಖಬೆಲೆಯ 535 ಕೋ.ನೋಟುಗಳಿಗೆ ಬೇಡಿಕೆ ಸಲ್ಲಿಸಲಾಗಿತ್ತಾದರೂ ಕೇವಲ 490 ಕೋ.ನೋಟುಗಳು ಪೂರೈಕೆಯಾಗಿದ್ದವು ಎಂದು ಪತ್ರವು ತಿಳಿಸಿದೆ.
ಹಾಲಿ ಇದ್ದ 500 ರೂ.ನೋಟುಗಳನ್ನು ರದ್ದುಗೊಳಿಸಿ ಹೊಸ 500 ರೂ. ನೋಟುಗಳನ್ನು ಸಕಾಲದಲ್ಲಿ ಒದಗಿಸದ್ದಕ್ಕೆ ಕಾರಣವೇನು ಎನ್ನುವುದು ಅರ್ಥವಾಗುತ್ತಿಲ್ಲ ಎಂದೂ ಪತ್ರವು ಹೇಳಿದೆ.
ದೇಶಾದ್ಯಂತವಿರುವ 2.20 ಲಕ್ಷ ಎಟಿಎಂಗಳ ಪೈಕಿ ಹೆಚ್ಚಿನವು ಮುಚ್ಚಲ್ಪಟ್ಟಿವೆ ಅಥವಾ ಭಾಗಶಃ ಕಾರ್ಯಾಚರಿಸುತ್ತಿವೆ. ಇದು ಬ್ಯಾಂಕ್ ಉದ್ಯೋಗಿಗಳ ಕೆಲಸದ ಒತ್ತಡವನ್ನು ಹೆಚ್ಚಿಸಿದೆ. ತಮ್ಮ ಖಾತೆಗಳಿಂದ ಹಣ ಪಡೆಯಲು ಗ್ರಾಹಕರು ಶಾಖೆಗಳಿಗೆ ಭೇಟಿ ನೀಡುವುದು ಅನಿವಾರ್ಯವಾಗಿದೆ ಎಂದಿರುವ ಯೂನಿಯನ್‌ಗಳು, ಬ್ಯಾಂಕ್‌ಗಳ ಮೇಲಿನ ಒತ್ತಡವನ್ನು ತಗ್ಗಿಸಲು ಮತ್ತು ಗ್ರಾಹಕರಿಗೆ ನೆಮ್ಮದಿಯನ್ನು ನೀಡಲು ರಿಜರ್ವ್ ಬ್ಯಾಂಕ್ ಹೆಚ್ಚಿನ ಸಂಖ್ಯೆಯಲ್ಲಿ 100 ಮತ್ತು 500 ರೂ.ನೋಟುಗಳನ್ನು ಒದಗಿಸುವಂತೆ ನೋಡಿಕೊಳ್ಳಬೇಕೆಂದು ಐಬಿಎ ಅನ್ನು ಒತ್ತಾಯಿಸಿವೆ.







