ಬಡವರು ಸುಖವಾಗಿ ನಿದ್ದೆ ಮಾಡುತ್ತಿದ್ದಾರೆ: ಪ್ರಧಾನಿ ಮೋದಿ
ಘಾಜಿಪುರ(ಉ.ಪ್ರ),ನ.14: ತನ್ನ ನೋಟು ನಿಷೇಧ ನಿರ್ಧಾರದ ಬಳಿಕ ಭ್ರಷ್ಟರು ಹತಾಶರಾಗಿ ನಿದ್ರೆ ಬಾರದೆ ಮಾತ್ರೆಗಳಿಗಾಗಿ ಎಡತಾಕುತ್ತಿದ್ದರೆ, ಬಡವರು ಸುಖನಿದ್ರೆಯನ್ನು ಅನುಭವಿಸು ತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭ್ರಷ್ಟಾಚಾರವನ್ನು ಬೇರು ಸಹಿತ ಕಿತ್ತೊಗೆಯಲು ಸ್ವಲ್ಪ ಅನನುಕೂಲವನ್ನು ಸಹಿಸಿ ಕೊಳ್ಳುವಂತೆ ಇದೇ ವೇಳೆ ಅವರು ಜನತೆಯನ್ನು ಆಗ್ರಹಿಸಿದರು.
ಬಿಜೆಪಿಯ ಪರಿವರ್ತನ್ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ಅವರು, ನೋಟು ನಿಷೇಧ ಕ್ರಮದ ಬಳಿಕ ಜನರು ಅನುಭವಿಸುತ್ತಿರುವ ಅನನುಕೂಲತೆಗಳನ್ನು ತಾನು ಅರ್ಥ ಮಾಡಿಕೊಂಡಿದ್ದೇನೆ ಎಂದರು. ತನ್ನ ಕ್ರಮವನ್ನು ಅವರು ಘಾಟು ವಾಸನೆಯನ್ನು ಬೀರುವ, ಆದರೂ ಅಗತ್ಯವಾಗಿರುವ ಹೊಸದಾಗಿ ಸುಣ್ಣ ಬಳಿಯುವ ಕ್ರಮಕ್ಕೆ ಹೋಲಿಸಿದರು.
‘‘ನನ್ನ ನಿರ್ಧಾರ ನಾನು ಚಾಯ್‌ವಾಲಾ ಆಗಿ ಮಾರುತ್ತಿದ್ದ ಚಹಾದಂತೆ ‘ಖಡಕ್’ ಆಗಿದೆ. ನಾನು ಯುವಕನಾಗಿದ್ದಾಗ ಬಡವರು ನನ್ನ ಬಳಿ ಖಡಕ್ ಚಹಾ ಕೇಳುತ್ತಿದ್ದರು, ಆದರೆ ಅದು ಶ್ರೀಮಂತರ ಮೂಡ್ ಅನ್ನು ಹಾಳುಮಾಡುತ್ತದೆ’’ ಎಂದರು.
ತನ್ನ ವಿರುದ್ಧ ಸಾಮಾನ್ಯ ಜನರಿಗೆ ಕಿರುಕುಳ ನೀಡುತ್ತಿರುವ ಆರೋಪವನ್ನು ಹೊರಿಸಿರುವ ಕಾಂಗ್ರೆಸ್ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದ ಅವರು, ಕಾಂಗ್ರೆಸ್ ಸರಕಾರಗಳು ತುರ್ತು ಸ್ಥಿತಿಯನ್ನು ಹೇರಿದ್ದು,ಜನರು ಮತ್ತು ಮಾಧ್ಯಮಗಳ ಹಕ್ಕುಗಳನ್ನು ನಿರ್ಬಂಧಿಸಿದ್ದು ಮತ್ತು ನಾಲ್ಕಾಣೆ ನಾಣ್ಯವನ್ನು ನಿಷೇಧಿಸಿದ್ದನ್ನು ನೆನಪಿಸಿದರು.
ಯಾವ ಕಾನೂನಿನಡಿ ಅವರು ನಾಲ್ಕಾಣೆಯನ್ನು ನಿಷೇಧಿಸಿದ್ದರು? ಅವರಿಗೆ ನಾಲ್ಕಾಣೆಗಿಂತ ಮುಂದೆ ಹೋಗಲು ಸಾಧ್ಯವಿರಲಿಲ್ಲ ಎನ್ನುವುದು ಬೇರೆಯ ಮಾತು. ನೀವು ನಿಮ್ಮ ಅಂತಸ್ತಿಗೆ ತಕ್ಕಂತೆ ಕ್ರಮ ಕೈಗೊಂಡಿದ್ದೀರಿ ಮತ್ತು ನಾವು ನಮ್ಮ ಅಂತಸ್ತಿಗೆ ತಕ್ಕಂತೆ ಕ್ರಮವನ್ನು ಕೈಗೊಂಡಿದ್ದೇವೆ ಎಂದು ಅವರು ಪ್ರತಿಪಕ್ಷವನ್ನು ತಿವಿದರು.
ಜವಾಹರಲಾಲ್ ನೆಹರೂ ಅವರನ್ನು ಪ್ರಸ್ತಾಪಿಸಿದ ಅವರು, ನೂತನ ಯೋಜನೆಗಳಿಗೆ ಚಾಲನೆ ನೀಡಲು ಇಲ್ಲಿಗೆ ಭೇಟಿಗಾಗಿ ತಾನು ಉದ್ದೇಶಪೂರ್ವಕವಾಗಿ ಅವರ ಜನ್ಮದಿನವನ್ನು ಆಯ್ಕೆ ಮಾಡಿದ್ದೆ ಎಂದರು. ‘‘ನೀವು(ನೆಹರೂ) ಈಗ ಬದುಕಿಲ್ಲ. ನಿಮ್ಮ ಪಕ್ಷದ ನಾಯಕರು ಮತ್ತು ನಿಮ್ಮ ಕುಟುಂಬ ಸದಸ್ಯರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಆದರೂ ಈ ದೇಶದ ಜನರ ಏಳಿಗೆಯ ನಿಮ್ಮ ಈಡೇರದ ಕನಸುಗಳನ್ನು ನನಸಾಗಿಸಲು ನಿಮ್ಮ ಜನ್ಮದಿನದಂದು ನಾನು ಹೊಸ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದೇನೆ’’ ಎಂದರು.
ಪ್ರತಿಪಕ್ಷ ನಾಯಕರು ಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಈ ದೇಶದಲ್ಲಿ ಭ್ರಷ್ಟಾಚಾರ ಮತ್ತು ಅಪ್ರಾಮಾಣಿಕತೆಗೆ ಅವಕಾಶ ನೀಡಬೇಕೇ ಎಂದು ಪ್ರಶ್ನಿಸಿದರು.







