ನೋಟು ರದ್ದತಿಯಿಂದ ದೇಶಾದ್ಯಂತ ಸಂಕಷ್ಟ: ಪಿಣರಾಯಿ
ಹೊಸದಿಲ್ಲಿ, ನ.14: ಕೇಂದ್ರ ಸರಕಾರದ ದೊಡ್ಡ ನೋಟು ರದ್ದತಿ ನಿರ್ಧಾರದಿಂದ ದೇಶಾದ್ಯಂತ ಜನರಿಗೆ ಕಷ್ಟವಾಗಿದೆ. ಸಾಕಷ್ಟು ಮುಂಜಾಗ್ರತೆ ಕ್ರಮ ಕೈಗೊಳ್ಳದಿರುವುದು ಇದಕ್ಕೆ ಕಾರಣವಾಗಿದೆಯೆಮದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ಆರೋಪಿಸಿದ್ದಾರೆ.
ಚಲಾವಣೆಯಲ್ಲಿದ್ದ ಶೇ.84ರಷ್ಟು ನೋಟುಗಳು ಅಮಾನ್ಯವಾಗಿವೆ. ಹಿಂದೆಗೆದ ನೋಟುಗಳಿಗೆ ಸಾಕಷ್ಟು ಪ್ರಮಾಣದ ಹೊಸ ನೋಟು ಬಿಡುಗಡೆಯಾಗಿಲ್ಲ ನರೇಂದ್ರ ಮೋದಿ ಸರಕಾರದ ಈ ವೈಫಲ್ಯ ಭಯಂಕರವಾಗಿದೆ. ಯಾವುದೇ ಸರಕಾರಕ್ಕೂ ಈ ರೀತಿ ಆಗಬಾರದಿತ್ತೆಂದು ಅವರು ಹೇಳಿದ್ದಾರೆ.
ವಿಜಯನ್ ಇಲ್ಲಿನ ಪ್ರಗತಿ ಮೈದಾನದಲ್ಲಿ ಭಾರತದ ಅಂತಾರಾಷ್ಟ್ರೀಯ ವ್ಯಾಪಾರ ಮೇಳದ 36ನೆ ಆವೃತ್ತಿಯಲ್ಲಿ ಕೇರಳ ಪೆವಿಲಿಯನ್ ಉದ್ಘಾಟಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರನ್ನು ಇಂದು ಭೇಟಿಯಾದ ವಿಜಯನ್, ನ.16ರಂದು ಆರಂಭವಾಗುವ ಶಬರಿಮಲೆ ಯಾತ್ರೆಯ ಸುಗಮ ನಿರ್ವಹಣೆಯ ಕುರಿತಾಗಿ ರಾಜ್ಯದ ಕಳವಳವನ್ನು ವ್ಯಕ್ತಪಡಿಸಿದರು.
ಕೆಲವೇ ದಿನಗಳಲ್ಲಿ ಶಬರಿಮಲೆ ಯಾತ್ರೆ ಆರಂಭವಾಗಲಿದೆ. ನೋಟು ರದ್ದತಿಯಿಂದ ಯಾತ್ರಿಕರು ಎದುರಿಸಬೇಕಾದ ಸಂಕಷ್ಟದ ಕುರಿತು ತಾನು ಜೇಟ್ಲಿಯವರಿಗೆ ಮನವರಿಕೆ ಮಾಡಿದೆನೆಂದು ಅವರು ತಿಳಿಸಿದರು.
ಶಬರಿಮಲೆಯಲ್ಲಿ ಬ್ಯಾಂಕ್‌ಗಳ ಎಕ್ಸ್‌ಟೆನ್ಶನ್ ಕೌಂಟರ್‌ಗಳನ್ನು ತೆರೆಯುವ ಬಗ್ಗೆ ಜೇಟ್ಲಿ ಒಪ್ಪಿದ್ದಾರೆಂದು ವಿಜಯನ್ ಹೇಳಿದರು.





