ವಿಜೇಂದರ್‌ಗೆ ಫ್ರಾನ್ಸಿಸ್ ಚೆಕಾ ಎದುರಾಳಿ
ಹೊಸದಿಲ್ಲಿ, ನ.14: ಭಾರತದ ಬಾಕ್ಸಿಂಗ್ ಸ್ಟಾರ್ ವಿಜೇಂದರ್ ಸಿಂಗ್ ಡಿ.17 ರಂದು ನಡೆಯಲಿರುವ ಡಬ್ಲುಬಿಒ ಸೂಪರ್ ಮಿಡ್ಲ್‌ವೇಟ್ ಏಷ್ಯಾ ಪೆಸಿಫಿಕ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಮಾಜಿ ವಿಶ್ವ ಚಾಂಪಿಯನ್ ಫ್ರಾನ್ಸಿಸ್ ಚೆಕಾರನ್ನು ಎದುರಿಸಲಿದ್ದಾರೆ.
ತಾಂಜಾನಿಯದ 34ರ ಹರೆಯದ ಹಿರಿಯ ಬಾಕ್ಸರ್ ಚೆಕಾ 43 ಬಾಕ್ಸಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಈ ಪೈಕಿ 32ರಲ್ಲಿ ಜಯ ಸಾಧಿಸಿದ್ದಾರೆ. 16 ವರ್ಷಗಳ ವೃತ್ತಿಜೀವನದಲ್ಲಿ ಚೆಕಾ 300 ಸುತ್ತು ಪಂದ್ಯಗಳನ್ನು ಆಡಿದ್ದಾರೆ. ವಿಜೇಂದರ್ ಈತನಕ 27 ಸುತ್ತು ಪಂದ್ಯ ಗಳನ್ನು ಆಡುತ್ತಿದ್ದಾರೆ. ಮಾಜಿ ಡಬ್ಲುಬಿಎಫ್ ವಿಶ್ವ ಚಾಂಪಿಯನ್ ಆಗಿರುವ ಚೆಕಾ ಈ ವರ್ಷಾರಂಭದಲ್ಲಿ ಇಂಟರ್‌ಕಾಂಟಿನೆಂಟೆಲ್ ಸೂಪರ್ ಮಿಡ್ಲ್‌ವೇಟ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಜಯಿಸಿದ್ದಾರೆ.
ಮತ್ತೊಂದೆಡೆ, ವಿಜೇಂದರ್ ಕಳೆದ ಏಳು ಪಂದ್ಯಗಳಲ್ಲಿ ಸೋಲನ್ನೇ ಕಾಣದೆ ಅಜೇಯವಾಗುಳಿದಿದ್ದಾರೆ. ವಿಜೇಂದರ್ ಎದುರಿಸುತ್ತಿರುವ ಅತ್ಯಂತ ಅನುಭವಿ ಬಾಕ್ಸರ್ ಚೆಕಾ. ಭಾರತದ ಬಿಗ್‌ಹಿಟ್ಟರ್ ವಿಜೇಂದರ್‌ಗೆ ಚೆಕಾ ವಿರುದ್ಧ ಭಾರೀ ಸವಾಲು ಎದುರಾಗಿದೆ.
ವಿಜೇಂದರ್ ಈ ವರ್ಷದ ಜುಲೈನಲ್ಲಿ ದಿಲ್ಲಿಯ ತ್ಯಾಗರಾಜ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯದ ಕೆರ್ರಿ ಹೋಪ್‌ರನ್ನು ಮಣಿಸಿ ಮೊದಲ ಬಾರಿ ಡಬ್ಲುಬಿಒ ಪ್ರಶಸ್ತಿಯನ್ನು ಜಯಿಸಿದ್ದರು.







