ಭಾರೀ ಪ್ರಮಾಣದಲ್ಲಿ ಬಿಳಿಯಾಗುತ್ತಿರುವ ಕಪ್ಪು ಹಣ!

ಹೊಸದಿಲ್ಲಿ, ನ.14: 500 ಮತ್ತು 1,000 ರೂ.ನೋಟುಗಳನ್ನು ರದ್ದುಗೊಳಿಸಿರುವ ಮೋದಿ ಸರಕಾರದ ಕ್ರಮದಿಂದಾಗಿ ಬಡವರು ಸಂಕಷ್ಟಕ್ಕೆ ಸಿಲುಕಿದ್ದರೆ ಕಾಳಧನ ಖದೀಮರು ತಮ್ಮ ಸಂಪತ್ತನ್ನು ಉಳಿಸಿಕೊಳ್ಳಲು ನಾನಾ ರೀತಿಯ ಮಾರ್ಗಗಳನ್ನು ಹುಡುಕಿಕೊಳ್ಳುತ್ತಿದ್ದಾರೆ.
ರಾಜಸ್ಥಾನದ ಪಾಲಿಯಲ್ಲಿ ಆ್ಯಂಬುಲನ್ಸ್ ಚಾಲಕ ಹಳೆಯ ನೋಟುಗಳನ್ನು ಸ್ವೀಕರಿಸಲು ಒಪ್ಪದ ಕಾರಣ ಅನಾರೋಗ್ಯ ಪೀಡಿತ ತಮ್ಮ ಶಿಶುವನ್ನು ಆಸ್ಪತ್ರೆಗೆ ಒಯ್ಯಲು ಕುಟುಂಬವೊಂದಕ್ಕೆ ಸಾಧ್ಯವಾಗಲಿಲ್ಲ. ತುಂಬ ಪರದಾಟದ ಬಳಿಕ 100 ರೂ.ನೋಟು ಗಳು ಸಿಕ್ಕಿದ್ದವಾದರೂ ಆವೇಳೆಗೆ ಶಿಶು ಕೊನೆಯುಸಿರೆಳೆದಿತ್ತು. ಸರಕಾರವು 500 ಮತ್ತು 1,000 ರೂ. ನೋಟುಗಳನ್ನು ರದ್ದುಗೊಳಿಸಿದ ಬಳಿಕ ಸಂಭವಿಸಿದ ಇಂತಹ ಹಲವಾರು ಸಾವುಗಳಲ್ಲಿ ಇದೂ ಒಂದು.
ಅಂದ ಹಾಗೆ ಈ ಎಲ್ಲ ಸಾವುಗಳು ಮಧ್ಯಮ ವರ್ಗ ಮತ್ತು ಬಡ ಕುಟುಂಬಗಳಲ್ಲಿಯೇ ಸಂಭವಿಸಿವೆ. ನೋಟು ನಿಷೇಧದ ಸುದ್ದಿ ಯಿಂದಾಗಿ ಕಾಳಧನ ಖದೀಮರು ಆತ್ಮಹತ್ಯೆ ಮಾಡಿಕೊಂಡ ಅಥವಾ ಹೃದಯಾಘಾತಕ್ಕೊಳಗಾದ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಇದೆಲ್ಲ ಏಕೆಂದರೆ ಮೊದಲನೆಯದಾಗಿ ಕಪ್ಪುಹಣ ಖದೀಮರು ತಮ್ಮ ಬಳಿ ನಗದು ಹಣವನ್ನು ತುಂಬ ಕಡಿಮೆ ಪ್ರಮಾಣದಲ್ಲಿ ಇಟ್ಟುಕೊಂಡಿರುತ್ತಾರೆ. ಕಪ್ಪುಹಣವನ್ನು ಬಿಳಿ ಮಾಡುವ ಮಾರ್ಗಗಳನ್ನು ಕಂಡುಕೊಳ್ಳುವ ಅವರು ಅದನ್ನು ವಿವಿಧ ಬಗೆಯ ಆಸ್ತಿಗಳಲ್ಲಿ ಹೂಡಿಕೆ ಮಾಡಿರುತ್ತಾರೆ. ರಿಯಲ್ ಎಸ್ಟೇಟ್ ಎಲ್ಲರಿಗೂ ಗೊತ್ತಿರುವ ಅತ್ಯುತ್ತಮ ಮಾರ್ಗ. ಇದರ ಜೊತೆಗೆ ಚಿನ್ನ,ವಿದೇಶಿ ಕರೆನ್ಸಿ,ಭಾರತೀಯ ಬ್ಯಾಂಕುಗಳಲ್ಲಿ ಬೇನಾಮಿ ಖಾತೆಗಳು,ಷೇರು ಮಾರುಕಟ್ಟೆ ಇತ್ಯಾದಿಗಳೂ ಈ ಕಾಳಧನ ಖದೀಮರ ನೆರವಿಗೆ ಬರುತ್ತವೆ.
ಆದಾಯ ತೆರಿಗೆ ಅಧಿಕಾರಿಗಳು ಪತ್ತೆ ಹಚ್ಚಿರುವ ಅಕ್ರಮ ಸಂಪತ್ತಿನ ವಿಶ್ಲೇಷಣೆಯಂತೆ ಅಕ್ರಮ ಸಂಪತ್ತಿನ ಕೇವಲ ಶೇ.6ರಷ್ಟು ಭಾಗ ನಗದು ರೂಪದಲ್ಲಿರುತ್ತದೆ. ಈ ಹಣವನ್ನೂ ಹೆಚ್ಚಿನವರು ಉಳಿಸಿಕೊಳ್ಳುವಂತೆ ಕಂಡುಬರುತ್ತಿದೆ. ಕಪ್ಪುಹಣವನ್ನು ಬಿಳಿಯನ್ನಾಗಿಸುವುದು ಹೇಗೆ ಎನ್ನುವುದನ್ನು ಜನರು ಗೂಗಲ್‌ನಲ್ಲಿ ಹುಡುಕಾಡುತ್ತಿದ್ದಾರೆ ಮತ್ತು ಹೆಚ್ಚಿನ ಹುಡುಕಾಟಗಳನ್ನು ಮಾಡುತ್ತಿರುವುದು ಪ್ರಧಾನಿ ಮೋದಿಯವರ ತವರು ರಾಜ್ಯ ಗುಜರಾತಿನ ಜನರು!
ಇಂತಹ ಜನರು ಯಶಸ್ವಿಯಾಗಲು ಬಳಸುತ್ತಿರುವ 13 ವಿಧಾನಗಳು ಇಲ್ಲಿವೆ...
1) ದೇವಸ್ಥಾನಗಳಿಗೆ ಕಾಣಿಕೆ: ಜನರು ತಮ್ಮ ಕಪ್ಪುಹಣವನ್ನು ದೇವಸ್ಥಾನಗಳ ಹುಂಡಿಗಳಿಗೆ ನೀಡುತ್ತಿರುವುದು ವರದಿಯಾಗುತ್ತಿದೆ. ದೇವಸ್ಥಾನದ ಆಡಳಿತವು ಇದನ್ನು ಅನಾಮಧೇಯ ಕೊಡುಗೆಯೆಂದು ತೋರಿಸಿ ಹೊಸ ಕರೆನ್ಸಿ ನೋಟುಗಳಿಗೆ ಬದಲಿಸಿಕೊಳ್ಳುತ್ತದೆ. ಈ ಸೇವೆಗಾಗಿ ಕಮಿಷನ್ ಇಟ್ಟುಕೊಂಡು ಉಳಿದ ಹಣವನ್ನು ಮಾಲಕನಿಗೆ ಮರಳಿಸುತ್ತದೆ. ದೇವಸ್ಥಾನಗಳ ಹುಂಡಿಗಳಿಂದ ಜಮೆಯಾಗುವ ಹಣದ ಮೂಲವನ್ನು ಪ್ರಶ್ನಿಸುವುದಿಲ್ಲವೆಂದು ಸರಕಾರವು ಈಗಾಗಲೇ ಸ್ಪಷ್ಟಪಡಿಸಿದೆ.
2) ಸಹಕಾರಿ ಬ್ಯಾಂಕುಗಳು ಮತ್ತು ಕ್ರೆಡಿಟ್ ಸೊಸೈಟಿಗಳಲ್ಲಿ ಹಿಂದಿನ ದಿನಾಂಕಗಳ ಎಫ್‌ಡಿಗಳು: ಇಂತಹ ಹೆಚ್ಚಿನ ಸಂಸ್ಥೆಗಳಲ್ಲಿ ಇನ್ನೂ ಕಂಪ್ಯೂಟರ್‌ಗಳನ್ನು ಬಳಸಲಾಗುತ್ತಿಲ್ಲ. ಹೀಗಾಗಿ ಕಪ್ಪುಹಣವಿರುವವರು ತಮ್ಮ ವಿಶ್ವಾಸದ ಗ್ರಾಮಸ್ಥರ ಹೆಸರುಗಳಲ್ಲಿ ಹಿಂದಿನ ದಿನಾಂಕಗಳನ್ನು ಉಲ್ಲೇಖಿಸಿ ಎಫ್‌ಡಿಗಳನ್ನು ಮಾಡುತ್ತಿದ್ದಾರೆ. ಕೆಲಕಾಲದ ಬಳಿಕ ಅವರು ಹೊಸ ಕರೆನ್ಸಿಯಲ್ಲಿ ಈ ಎಫ್‌ಡಿಗಳನ್ನು ವಾಪಸ್ ಪಡೆಯುತ್ತಾರೆ. ತಾವು ಯಾರ ಹೆಸರುಗಳಲ್ಲಿ ಠೇವಣಿ ಮಾಡಿದ್ದೇವೋ ಅವರಿಗೆ ಕಮಿಷನ್ ಸಂದಾಯ ಮಾಡುತ್ತಾರೆ.
3) ಬ್ಯಾಂಕುಗಳಲ್ಲಿ 2.5 ಲ.ರೂ.ವರೆಗಿನ ಠೇವಣಿಗಳನ್ನು ಆದಾಯ ತೆರಿಗೆ ಅಧಿಕಾರಿಗಳು ಪ್ರಶ್ನಿಸುವುದಿಲ್ಲ ಎಂದು ಸರಕಾರವು ಭರವಸೆ ನೀಡಿದೆ. ಹೀಗಾಗಿ ಕಾಳಧನ ಖದೀಮರು ಬಡವರನ್ನು ಹಿಡಿದು ಅವರ ಖಾತೆಗಳಿಗೆ 2.5ಲ.ರೂ.ಮೊತ್ತದ ಹಳೆಯ ನೋಟುಗಳನ್ನು ತುಂಬಿಸುತ್ತಿದ್ದಾರೆ. ಕಾಲಕ್ರಮೇಣ ಆ ಬಡಮನುಷ್ಯ ಹಣವನ್ನು ಹಿಂಪಡೆದು ಅದರಲ್ಲಿ ತನ್ನ ಕಮಿಷನ್ ಮುರಿದುಕೊಂಡು ಉಳಿದಿದ್ದನ್ನು ಮಾಲಕನಿಗೆ ವಾಪಸ್ ಮಾಡುವ ಬಗ್ಗೆ ಒಪ್ಪಂದವಾಗಿರುತ್ತದೆ.
4) ಬಡವರಿಗೆ ಸಾಲ ನೀಡಿಕೆ: ಯಾವುದೇ ಶಂಕೆಗಳನ್ನು ಹುಟ್ಟುಹಾಕದ ಬ್ಯಾಂಕ್ ವಹಿವಾಟುಗಳನ್ನು ನಡೆಸುತ್ತಿರುವ ಬಡವರಿಗೆ ಸಾಲವನ್ನು ನೀಡುವುದು ಕಪ್ಪುಹಣವನ್ನು ಬಿಳಿಮಾಡುವ ವಿಧಾನಗಳಲ್ಲೊಂದಾಗಿದೆ. ಹೆಚ್ಚಿನ ಕಾಳಧನ ಖದೀಮರು ಬಡ್ಡಿರಹಿತ ಸಾಲಗಳನ್ನೂ ನೀಡುತ್ತಿದ್ದಾರೆ. ಹೀಗೆ ಸಾಲ ನೀಡಿ ಬಳಿಕ ಹೊಸ ಕರೆನ್ಸಿಗಳ ರೂಪದಲ್ಲಿ ವಾಪಸ್ ಪಡೆದು ಸುರಕ್ಷಿತರಾಗುತ್ತಾರೆ.
5) ಜನಧನ್ ಖಾತೆಗಳ ಬಳಕೆ: ಜನಧನ್ ಖಾತೆಗಳಲ್ಲಿ 50,000 ಅಥವಾ 100,000 ರೂ.ವರೆಗೆ ಹಣವನ್ನು ಠೇವಣಿಯಿಡಬಹು ದಾಗಿದೆ. ಕಾಳಧನ ಶ್ರೀಮಂತರು ಇಂತಹ ಜನಧನ್ ಖಾತೆಗಳ ಮೂಲಕ ತಮ್ಮ ಕಪ್ಪುಹಣವನ್ನು ಠೇವಣಿಯಿರಿಸುತ್ತಿದ್ದಾರೆ. ಕೆಲ ಸಮಯದ ಬಳಿಕ ಇವನ್ನು ವಾಪಸ್ ಪಡೆದು ಖಾತೆದಾರನಿಗೆ ಕಮಿಷನ್ ನೀಡುತ್ತಾರೆ.
6) ಬ್ಯಾಂಕ್ ನೋಟ್ ಮಾಫಿಯಾ: ನೋಟು ನಿಷೇಧದ ಬೆನ್ನಿಗೇ ಬ್ಯಾಂಕ್‌ನೋಟ್ ಮಾಫಿಯಾ ಹುಟ್ಟಿಕೊಂಡಿದೆ. ಈ ಮಾಫಿಯಾ ಕಪ್ಪುಹಣವನ್ನು ಪಡೆದುಕೊಂಡು ತನ್ನ ಕಮಿಷನ್ ಮುರಿದುಕೊಂಡು ಉಳಿದ ಹಣವನ್ನು 100 ರೂ. ನೋಟುಗಳ ಮೂಲಕ ವಾಪಸ್ ಮಾಡುತ್ತದೆ. ಈ ಮಾಫಿಯಾ ಬಡವರನ್ನು ಬಳಸಿಕೊಂಡು ಅಥವಾ ತನ್ನದೇ ಬೇರೆ ವಿಧಾನಗಳ ಮೂಲಕ ಕಪ್ಪುಹಣವನ್ನು ಬಿಳಿಯಾಗಿಸಿಕೊಳ್ಳುತ್ತದೆ.
7) ಮುಂಗಡ ವೇತನ ಪಾವತಿ: ಕಪ್ಪುಹಣವನ್ನು ಹೊಂದಿರುವ ಉದ್ಯಮಗಳು ತಮ್ಮ ಉದ್ಯೋಗಿಗಳಿಗೆ ಹಳೆಯ 500 ಮತ್ತು 1,000 ರೂ.ನೋಟುಗಳಲ್ಲಿ 3 ರಿಂದ 8 ತಿಂಗಳ ಮುಂಗಡ ವೇತನಗಳನ್ನು ಪಾವತಿಸುತ್ತಿರುವುದು ವರದಿಯಾಗಿದೆ.
8) ರೈಲ್ವೆ ಟಿಕೇಟುಗಳ ಬುಕಿಂಗ್ ಮತ್ತು ರದ್ದತಿ: ನ.14ರವರೆಗೆ ರೈಲ್ವೆ ಕೌಂಟರ್‌ಗಳಲ್ಲಿ ಹಳೆಯ ನೋಟುಗಳನ್ನು ಸ್ವೀಕರಿಸಲಾಗುತ್ತಿರುವುದರಿಂದ ದುಬಾರಿ ವೆಚ್ಚದ ಟಿಕೇಟುಗಳ ಬುಕಿಂಗ್‌ನಲ್ಲಿ ಭಾರೀ ಏರಿಕೆಯಾಗಿದೆ. ಬಳಿಕ ಸಣ್ಣ ಪ್ರಮಾಣದ ಶುಲ್ಕವನ್ನು ಪಾವತಿಸಿ ಈ ಟಿಕೇಟ್‌ಗಳನ್ನು ರದ್ದುಗೊಳಿಸಿದರೆ ಹೊಸ ನೋಟುಗಳಲ್ಲಿ ಮರುಪಾವತಿ ದೊರೆಯುತ್ತದೆ.
9) ವೃತ್ತಿಪರ ಹಣಚೆಲುವೆ ಸಂಸ್ಥೆಗಳ ಬಳಕೆ: ಲೆಕ್ಕ ಪರಿಶೋಧಕರು ನಡೆಸುವ ಇಂತಹ ಸಂಸ್ಥೆಗಳು ಕೋಲ್ಕತಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ದೇಶದ ಉಳಿದೆಡೆಗಳಲ್ಲಿಯೂ ಹರಡಿಕೊಂಡಿವೆ. ತೆರಿಗೆ ಅಧಿಕಾರಿಗಳ ಕಣ್ಣು ತಪ್ಪಿಸಿ ಕಪ್ಪುಹಣವನ್ನು ಬಿಳಿಯಾಗಿಸುವುದರಲ್ಲಿ ನಿಸ್ಸೀಮವಾಗಿರುವ ಈ ಸಂಸ್ಥೆಗಳು ಸಂಪೂರ್ಣ ನಗದು ಹಣ ಬಳಕೆಯಾಗುವ ಹೆದ್ದಾರಿ ಸಾರಿಗೆಯಂತಹ ಉದ್ಯಮಗಳನ್ನು ಬಳಸಿಕೊಂಡು ಕಪ್ಪು ಹಣವನ್ನು ಬಿಳಿಯಾಗಿಸುತ್ತವೆ. ಪ್ರಸಕ್ತ ಆರ್ಥಿಕ ವರ್ಷಕ್ಕೆ ಹಿಂದಿನ ವರ್ಷದ ಬಿಲ್‌ಗಳನ್ನು ಸೃಷ್ಟಿಸುವುದು ಇಂತಹ ಸಂಸ್ಥೆಗಳಿಗೆ ಕಷ್ಟವೇನಲ್ಲ.
10) ಚಿನ್ನ ಖರೀದಿ: ಹಳೆಯ ನೋಟುಗಳನ್ನು ನೀಡಿ ಚಿನ್ನಾಭರಣ ಖರೀದಿ ಕಪ್ಪುಹಣ ಖದೀಮರ ನೆಚ್ಚಿನ ಮಾರ್ಗವಾಗಿದೆ. ವ್ಯಾಪಾರಿಗಳು ಹಿಂದಿನ ದಿನಾಂಕದ ಬಿಲ್‌ಗಳನ್ನು ನೀಡುವ ಮೂಲಕ ಹೆಚ್ಚಿನ ದರಗಳಲ್ಲಿ ಚಿನ್ನ ಮಾರಾಟ ಮಾಡಿ ದುಡ್ಡನ್ನು ಜೇಬಿಗಿಳಿಸುತ್ತಿದ್ದಾರೆ.
11) ಕೃಷಿಕರ ಬಳಕೆ: ಕೃಷಿ ಆದಾಯ ತೆರಿಗೆ ವ್ಯಾಪ್ತಿಗೊಳಪಡು ವುದಿಲ್ಲ. ಹೀಗಾಗಿ ಕಪ್ಪುಹಣ ಹೊಂದಿರುವವರು ಅದನ್ನು ಬಿಳಿ ಯಾಗಿಸಿಕೊಳ್ಳಲು ಕೃಷಿಕರನ್ನು ಬಳಸಿ ಕೊಳ್ಳುತ್ತಿದ್ದಾರೆ.
12) ರಾಜಕೀಯ ಪಕ್ಷಗಳ ಬಳಕೆ: ರಾಜಕೀಯ ಪಕ್ಷಗಳು ತಾವು ಸ್ವೀಕರಿಸುವ 20,000 ರೂ. ಅಥವಾ ಕಡಿಮೆ ಮೊತ್ತದ ದೇಣಿಗೆಗಳಿಗೆ ಅದನ್ನು ನೀಡಿದವರ ಹೆಸರುಗಳನ್ನು ಬಹಿರಂಗಗೊಳಿಸಬೇಕಿಲ್ಲ. ಹೀಗಾಗಿ ಕಪ್ಪುಹಣವನ್ನು ಬಿಳಿಯಾಗಿಸಿಕೊಳ್ಳಲು ರಾಜಕೀಯ ಪಕ್ಷಗಳ ಬಳಕೆಯಾಗುತ್ತಿರುವ ವರದಿಗಳಿವೆ.
13) ರಾಜಾರೋಷವಾಗಿ ಬ್ಯಾಂಕುಗಳಲ್ಲಿ ಜಮಾ ಮಾಡುವುದು: ಭಾರೀ ಮೊತ್ತದ ಠೇವಣಿಗಳಿಗೆ ಸೂಕ್ತ ಮೂಲವನ್ನು ವಿವರಿಸದಿದ್ದರೆ ತೆರಿಗೆಯ ಜೊತೆಗೆ ಅದರ ಎರಡು ಪಟ್ಟು ದಂಡ ಪಾವತಿಸಬೇಕಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಆದರೆ ಕಾನೂನು ರೀತ್ಯಾ ಇದು ಸಾಧ್ಯವಾಗದಿರಬಹುದು ಎನ್ನುವುದು ಆದಾಯ ತೆರಿಗೆ ಅಧಿಕಾರಿಗಳ ಅಭಿಪ್ರಾಯ. ವ್ಯಕ್ತಿಯೋರ್ವ ದೊಡ್ಡ ಮೊತ್ತವನ್ನು ಬ್ಯಾಂಕಿನಲ್ಲಿ ಜಮಾ ಮಾಡಿ ಪ್ರಸಕ್ತ ವರ್ಷದ ಲೆಕ್ಕಪತ್ರದಲ್ಲಿ ಅದನ್ನು ಇತರ ಮೂಲಗಳಿಂದ ಆದಾಯ ಎಂದು ತೋರಿಸಿ ಅದರ ಮೇಲೆ ಶೇ.33 ತೆರಿಗೆ ಪಾವತಿಸಿ ಪಾರಾಗಬಹುದು ಎನ್ನುತ್ತಾರೆ ಅವರು. ನಿಮ್ಮ ಠೇವಣಿಯ ಮೇಲೆ ದಂಡ ಹೇರಬೇಕಾದರೆ ಸರಕಾರವು ನೀವು ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಮೊತ್ತವನ್ನು ಗಳಿಸಿಲ್ಲ ಎಂದು ಸಿದ್ಧಪಡಿಸಬೇಕಾಗುತ್ತದೆ.







