50 ದಿನಗಳ ಬಳಿಕ ಜನರ ಬ್ಯಾಂಕ್ ಖಾತೆಗಳಿಗೆ 15 ಲ.ರೂ. ಬೀಳುವುದೇ?
ಪಟ್ನಾ, ನ.14: 50 ದಿನಗಳ ಬಳಿಕ ಚುನಾವಣಾ ಪ್ರಚಾರ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಈ ದೇಶದ ಪ್ರತಿಯೊಬ್ಬ ಪ್ರಜೆಯೂ ತನ್ನ ಬ್ಯಾಂಕ್ ಖಾತೆಯಲ್ಲಿ 15 ಲ.ರೂ.ಗಳನ್ನು ಪಡೆಯಲಿದ್ದಾನೆಯೇ ಎಂದು ಆರ್‌ಜೆಡಿ ವರಿಷ್ಠ ಲಾಲುಪ್ರಸಾದ್ ಯಾದವ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದಾರೆ.
ನೋಟು ನಿಷೇಧದ ಹಿನ್ನೆಲೆಯಲ್ಲಿ ಮೋದಿಯವರು ತನಗೆ 50 ದಿನಗಳ ಕಾಲಾವಕಾಶ ನೀಡುವಂತೆ ಮತ್ತು ‘ಸೀಮಿತ ಅನನುಕೂಲತೆಗಳನ್ನು’ ಸಹಿಸಿಕೊಳ್ಳುವಂತೆ ಜನತೆಗೆ ಪ್ರಧಾನಿಯವರ ಮನವಿಗೆ ಪ್ರತಿಕ್ರಿಯೆಯಾಗಿ ಲಾಲು ಸರಣಿ ಟ್ವೀಟ್‌ಗಳನ್ನು ಹರಿ ಬಿಟ್ಟಿದ್ದಾರೆ.
ಈ ಎಲ್ಲ ಕ್ರಮಗಳ ಬಳಿಕವೂ ಜನರು ತಮ್ಮ ಬ್ಯಾಂಕ್ ಖಾತೆಗಳಲ್ಲಿ ತಲಾ 15 ಲ.ರೂ.ಗಳನ್ನು ಪಡೆಯದಿದ್ದರೆ ಇದು ಶ್ರೀಸಾಮಾನ್ಯರ ವಿರುದ್ಧ ಮೋದಿ ನಡೆಸಿದ ‘ಫರ್ಜಿಕಲ್ (ಫಾರ್ಸಿಕಲ್)’ ದಾಳಿ ಅಥವಾ ‘ನಗೆಪಾಟಲಿನ ದಾಳಿ’ ಮತ್ತು ‘ನಕಲಿ ಎನ್‌ಕೌಂಟರ್’ ಎಂದಾಗುತ್ತದೆ ಎಂದು ಟೀಕಿಸಿರುವ ಲಾಲು, ಮುಂದಿನ ಎರಡು ತಿಂಗಳುಗಳಲ್ಲಿ ಕಪ್ಪುಹಣವನ್ನು ವಶಪಡಿಸಿಕೊಂಡ ಬಳಿಕ ಪ್ರತಿ ಪ್ರಜೆಯ ಬ್ಯಾಂಕ್ ಖಾತೆಯಲ್ಲಿ 15 ಲ.ರೂ.ಗಳನ್ನು ಹಾಕುವ ಭರವಸೆ ನೀಡುವಂತೆ ಮೋದಿಯವರನ್ನು ಆಗ್ರಹಿಸಿದ್ದಾರೆ.
ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತೆಸೆಯುವ ಮೋದಿಯವರ ಉದ್ದೇಶದ ಬಗ್ಗೆ ಶಂಕೆಗಳನ್ನು ವ್ಯಕ್ತಪಡಿಸಿರುವ ಅವರು, 2,000 ರೂ.ಮುಖಬೆಲೆಯ ನೋಟುಗಳನ್ನು ಬಿಡುಗಡೆಗೊಳಿಸುವಲ್ಲಿ ಸರಕಾರದ ವಿವೇಚನೆಯನ್ನೂ ಪ್ರಶ್ನಿಸಿದ್ದಾರೆ.
ಮೋದಿಯವರ ವಿರುದ್ಧ ಟೀಕಾಪ್ರಹಾರವನ್ನು ನಡೆಸಿರುವ ಲಾಲು, ಸುಸ್ತಿದಾರ ಕೈಗಾರಿಕೋದ್ಯಮಿಗಳು ಪಂಚತಾರಾ ಹೋಟೆಲ್‌ಗಳಲ್ಲಿ ಮೋಜು ಮಾಡುತ್ತಿದ್ದಾರೆ, ಸಾಮಾನ್ಯ ಜನರು ಸರದಿ ಸಾಲುಗಳಲ್ಲಿ ನಿಂತಿದ್ದಾರೆ ಮತ್ತು ನೀವು ವಿದೇಶ ವಿಹಾರದಲ್ಲಿ ತೊಡಗಿದ್ದೀರಿ. ಇಷ್ಟಾಗಿಯೂ ಸಾಲುಗಳಲ್ಲಿ ನಿಂತಿರುವವರು ಪುಂಡರು ಮತ್ತು ಕೆಲಸಕ್ಕೆ ಬಾರದವರು ಎಂದು ಹೇಳುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಕಪ್ಪುಹಣವನ್ನು ತಾನೂ ವಿರೋಧಿಸುತ್ತೇನೆ ಎಂದು ಒತ್ತಿ ಹೇಳಿದ ಅವರು, ಸರಕಾರವು ನೋಟು ನಿಷೇಧದ ತನ್ನ ನಿರ್ಧಾರವನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಎಡವಿದೆ ಮತ್ತು ತನ್ಮೂಲಕ ಸಾಮಾನ್ಯ ಜನರನ್ನು ಸಂಕಷ್ಟದಲ್ಲಿ ತಳ್ಳಿದೆ ಎಂದು ಹೇಳಿದ್ದಾರೆ.
ಇದು ದೊಡ್ಡ ಪ್ರಮಾಣದಲ್ಲಿ ಸುಸ್ತಿದಾರರಾಗಿರುವ ಕೈಗಾರಿಕೋದ್ಯಮಿಗಳನ್ನು ರಕ್ಷಿಸುವ ತಂತ್ರವೇ ಎಂದು ಪ್ರಧಾನಿಯವರನ್ನು ಪ್ರಶ್ನಿಸಿರುವ ಲಾಲು, ಅವರು ಬ್ಯಾಂಕುಗಳಿಗೆ ಬಾಕಿಯಿಟ್ಟಿರುವ ಸಾಲಬಾಕಿ ಮತ್ತು ಅವರ ವಿರುದ್ಧ ಸರಕಾರವು ಏನು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎನ್ನುವುದನ್ನು ತಿಳಿಸುವಂತೆ ಅವರನ್ನು ಆಗ್ರಹಿಸಿದ್ದಾರೆ.





