ರಣಜಿ ಟ್ರೋಫಿ: ಕರ್ನಾಟಕಕ್ಕೆ ಬೃಹತ್ ಮುನ್ನಡೆ
ವಿನಯ್, ಅರವಿಂದ್ ದಾಳಿಗೆ ರಾಜಸ್ಥಾನ ನಿರುತ್ತರ

ವಿಶಾಖಪಟ್ಟಣ, ನ.14: ನಾಯಕ ವಿನಯಕುಮಾರ್ ಹಾಗೂ ಎಸ್. ಅರವಿಂದ್ ಅಮೋಘ ಬೌಲಿಂಗ್ ನೆರವಿನಿಂದ ಕರ್ನಾಟಕ ತಂಡ ರಾಜಸ್ಥಾನ ವಿರುದ್ಧ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಭರ್ಜರಿ ಮುನ್ನಡೆ ಸಾಧಿಸಿದೆ.
ರಾಜಸ್ಥಾನವನ್ನು ಮೊದಲ ಇನಿಂಗ್ಸ್‌ನಲ್ಲಿ ಕೇವಲ 148 ರನ್‌ಗೆ ನಿಯಂತ್ರಿಸಿರುವ ಕರ್ನಾಟಕ ತಂಡ ಎರಡನೆ ಇನಿಂಗ್ಸ್ ಆರಂಭಿಸಿದ್ದು, ಎರಡನೆ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 78 ರನ್ ಗಳಿಸಿದೆ. ಒಟ್ಟು 304 ರನ್ ಮುನ್ನಡೆಯಲ್ಲಿದೆ. ಎರಡನೆ ದಿನದಾಟದಲ್ಲಿ ಒಟ್ಟು 14 ವಿಕೆಟ್‌ಗಳು ಪತನಗೊಂಡವು.
ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಆರ್. ಸಮರ್ಥ್(ಅಜೇಯ 46, 44 ಎಸೆತ, 9 ಬೌಂಡರಿ) ಹಾಗೂ ಕೆಎಲ್ ರಾಹುಲ್(ಅಜೇಯ 32, 46 ಎಸೆತ, 4 ಬೌಂಡರಿ, 1 ಸಿಕ್ಸರ್) ಕರ್ನಾಟಕದ ಬೃಹತ್ ಮುನ್ನಡೆಗೆ ಭದ್ರಬುನಾದಿ ಹಾಕಿಕೊಟ್ಟಿದ್ದಾರೆ.
ಇದಕ್ಕೆ ಮೊದಲು 6 ವಿಕೆಟ್‌ಗಳ ನಷ್ಟಕ್ಕೆ 245 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ ಕೇವಲ 29 ರನ್ ಸೇರಿಸುವಷ್ಟರಲ್ಲಿ 99.1 ಓವರ್‌ಗಳಲ್ಲಿ 374 ರನ್‌ಗೆ ಆಲೌಟಾಯಿತು.
ಮಧ್ಯಮ ವೇಗದ ಬೌಲರ್ ತನ್ವೀರ್‌ವುಲ್‌ಹಕ್(5-85) ಐದು ವಿಕೆಟ್ ಗೊಂಚಲು ಕಬಳಿಸಿದರೆ, ಪಂಕಜ್ ಸಿಂಗ್(2-82) ಹಾಗೂ ಸಲ್ಮಾನ್ ಖಾನ್(2-30) ತಲಾ ಎರಡು ವಿಕೆಟ್ ಪಡೆದರು.
ಎಸ್. ಗೋಪಾಲ್ ಹಾಗೂ ನಾಯಕ ವಿನಯ್‌ಕುಮಾರ್ ಬ್ಯಾಟಿಂಗ್‌ನ್ನು ಮುಂದುವರಿಸಿದರು. ಗೋಪಾಲ್ ನಿನ್ನೆಯ ಮೊತ್ತಕ್ಕೆ ಒಂದೂ ರನ್ ಸೇರಿಸದೇ ಪೆವಿಲಿಯನ್‌ಗೆ ಮರಳಿದರು.
ನಾಯಕ ವಿನಯ್‌ಕುಮಾರ್ ನಿನ್ನೆಯ ಮೊತ್ತಕ್ಕೆ ಕೇವಲ 2 ರನ್ ಸೇರಿಸಿ ರಾಜಸ್ಥಾನದ ಯಶಸ್ವಿ ಬೌಲರ್ ತನ್ವೀರ್‌ವುಲ್‌ಹಕ್‌ಗೆ ವಿಕೆಟ್ ಒಪ್ಪಿಸಿದರು.
ಗೌತಮ್(12), ಅರವಿಂದ್(11) ಹಾಗೂ ಸುಚಿತ್(ಅಜೇಯ 12) ದೊಡ್ಡ ಮೊತ್ತಗಳಿಸಲು ವಿಫಲರಾದರು.
ರಾಜಸ್ಥಾನ 148: ಕರ್ನಾಟಕವನ್ನು 374 ರನ್‌ಗೆ ಆಲೌಟ್ ಮಾಡಿ ಮೊದಲ ಇನಿಂಗ್ಸ್ ಆರಂಭಿಸಿದ ರಾಜಸ್ಥಾನ ಯಾವ ಹಂತದಲ್ಲೂ ಹೋರಾಟವನ್ನು ನೀಡದೇ ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತು.
ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಸಿದ್ದಾರ್ಥ್ ದೊಬಾಲ್(47) ಅಗ್ರ ಸ್ಕೋರರ್ ಎನಿಸಿಕೊಂಡರು. ರಾಜೇಶ್ ಬಿಶಾಯ್(25) ಅವರೊಂದಿಗೆ 7ನೆ ವಿಕೆಟ್‌ಗೆ 53 ರನ್ ಸೇರಿಸಿದರು. ಇದು ರಾಜಸ್ಥಾನ ಇನಿಂಗ್ಸ್‌ನಲ್ಲಿ ದಾಖಲಾದ ಗರಿಷ್ಠ ಜೊತೆಯಾಟವಾಗಿದೆ.
8 ರನ್‌ಗಳ ಅಂತರದಲ್ಲಿ ಕೊನೆಯ 4 ವಿಕೆಟ್‌ಗಳನ್ನು ಕಳೆದುಕೊಂಡ ರಾಜಸ್ಥಾನದ ಪರ ಪಿಐ ಶರ್ಮ(26), ಬಿಶಾಯ್(25) ಎರಡಂಕೆಯ ಸ್ಕೋರ್ ದಾಖಲಿಸಿದರು.
ಬಿಗಿ ಬೌಲಿಂಗ್ ಮಾಡಿದ ನಾಯಕ ವಿನಯಕುಮಾರ್(4-28) ಹಾಗೂ ಶ್ರೀನಾಥ್ ಅರವಿಂದ್(4-36) ರಾಜಸ್ಥಾನ ಬಾಲ ಬಿಚ್ಚದಂತೆ ನೋಡಿಕೊಂಡರು. 54 ಓವರ್‌ಗಳಲ್ಲಿ 148 ರನ್‌ಗೆ ಆಲೌಟ್ ಮಾಡಿದರು. ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 226 ರನ್ ಮುನ್ನಡೆ ಸಂಪಾದಿಸಿತು.
ಮೈಸೂರಿನಲ್ಲಿ ಮುಂಬೈಗೆ ಅಲ್ಪ ಮುನ್ನಡೆ
ಮೈಸೂರು: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ತಂಡ ಉತ್ತರ ಪ್ರದೇಶವನ್ನು 225 ರನ್‌ಗೆ ಆಲೌಟ್ ಮಾಡಿ ಮೊದಲ ಇನಿಂಗ್ಸ್‌ನಲ್ಲಿ ಅಲ್ಪ ಮುನ್ನಡೆ ಪಡೆಯಿತು. 2ನೆ ದಿನದಾಟದಂತ್ಯಕ್ಕೆ ಮುಂಬೈ 59 ರನ್ ಮುನ್ನಡೆಯಲ್ಲಿತ್ತು.
16ನೆ ಓವರ್‌ನಲ್ಲಿ ತುಷಾರ್ ದೇಶಪಾಂಡೆ(3-66) ಎರಡು ವಿಕೆಟ್ ಕಬಳಿಸಿದಾಗ ಉತ್ತರಪ್ರದೇಶ 45 ರನ್‌ಗೆ 4 ವಿಕೆಟ್ ಕಳೆದುಕೊಂಡಿತ್ತು. ಎರಡನೆ ರಣಜಿ ಪಂದ್ಯ ಆಡುತ್ತಿರುವ ರಿಂಕು ಸಿಂಗ್ ಎರಡನೆ ಅರ್ಧಶತಕ ಬಾರಿಸಿದರು. ಆದರೆ, ಅವರಿಗೆ ಕುಲ್‌ದೀಪ್ ಯಾದವ್(50) ಹೊರತುಪಡಿಸಿ ಉಳಿದ ಬ್ಯಾಟ್ಸ್‌ಮನ್‌ಗಳಿಂದ ಸಾಥ್ ಸಿಗಲಿಲ್ಲ. ರಿಂಕು ಸಿಂಗ್ ಹಾಗೂ ಯಾದವ್ 8ನೆ ವಿಕೆಟ್‌ಗೆ 53 ರನ್ ಜೊತೆಯಾಟ ನಡೆಸಿದರು.
ರಿಂಕು ಸಿಂಗ್ 70 ರನ್‌ಗೆ ಔಟಾದರು. ಆಗ ಉತ್ತರಪ್ರದೇಶ 170 ರನ್ ಗಳಿಸಿತ್ತು. ಇಮ್ತಿಯಾಝ್ ಅಹ್ಮದ್(19) ಅವರೊಂದಿಗೆ 9ನೆ ವಿಕೆಟ್‌ಗೆ 46 ರನ್ ಸೇರಿಸಿದ ಕುಲ್‌ದೀಪ್ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಅಭಿಷೇಕ್ ನಾಯರ್(2-19)ಗೆ ವಿಕೆಟ್ ಒಪ್ಪಿಸಿದ ಕುಲ್‌ದೀಪ್ ಅರ್ಧಶತಕ ವಂಚಿತರಾದರು. ಎರಡನೆ ಇನಿಂಗ್ಸ್ ಆರಂಭಿಸಿರುವ ಮುಂಬೈ ದಿನದಾಟ ಕೊನೆಗೊಂಡಾಗ 2 ವಿಕೆಟ್ ನಷ್ಟಕ್ಕೆ 51 ರನ್ ಗಳಿಸಿತ್ತು.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ ಪ್ರಥಮ ಇನಿಂಗ್ಸ್: 99.1 ಓವರ್‌ಗಳಲ್ಲಿ 374
(ಮಯಾಂಕ್ ಅಗರವಾಲ್ 81, ಕೆಎಲ್ ರಾಹುಲ್ 76, ಸಮರ್ಥ್ 62, ಬಿನ್ನಿ 37, ಗೌತಮ್ 35, ತನ್ವೀರ್‌ವುಲ್ ಹಕ್ 5-82, ಪಂಕಜ್ ಸಿಂಗ್ 2-82, ಸಲ್ಮಾನ್ ಖಾನ್ 2-30)
ರಾಜಸ್ಥಾನ ಮೊದಲ ಇನಿಂಗ್ಸ್: 54 ಓವರ್‌ಗಳಲ್ಲಿ 148 ರನ್‌ಗೆ ಆಲೌಟ್
(ದೊಬಾಲ್ 47, ಪಿಜೆ ಶರ್ಮ 26, ಬಿಶಾಯ್ 25, ವಿನಯಕುಮಾರ್ 4-28, ಎಸ್.ಅರವಿಂದ್ 4-36)
ಕರ್ನಾಟಕ ದ್ವಿತೀಯ ಇನಿಂಗ್ಸ್:
15 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 78
(ಆರ್.ಸಮರ್ಥ್ ಅಜೇಯ 46, ಕೆಎಲ್ ರಾಹುಲ್ ಅಜೇಯ 32)
ರಣಜಿ ಟ್ರೋಫಿ: 2ನೆ ದಿನದ ಫಲಿತಾಂಶ
ವಲ್ಸಾಡ್: ತ್ರಿಪುರಾ 171, ಆಂಧ್ರ 270/2
ಹೈದರಾಬಾದ್: ಅಸ್ಸಾಂ 301, ಒಡಿಶಾ 150/2
ನಾಗ್ಪುರ: ಬರೋಡಾ 183, ರೈಲ್ವೇಸ್ 268/7
ರಾಜ್‌ಕೋಟ್: ಬಂಗಾಳ 337, ತಮಿಳುನಾಡು 60/1
ಕಾನ್ಪುರ: ಛತ್ತೀಸ್‌ಗಢ 238, ಹಿಮಾಚಲಪ್ರದೇಶ 210/6
ಮುಂಬೈ: ಕೇರಳ 342, ಗೋವಾ 96/3
ನಾಗೊಥಾಣೆ: ಗುಜರಾತ್ 302, ಮಧ್ಯಪ್ರದೇಶ 114/2
ಕಟಕ್: ಹರ್ಯಾಣ 502, ಜಮ್ಮು-ಕಾಶ್ಮೀರ 84/1
ಮುಂಬೈ: ಹೈದರಾಬಾದ್ 580/9, ಸರ್ವಿಸಸ್ 77/0
ಅಗರ್ತಲ: ಸೌರಾಷ್ಟ್ರ 277, ಜಾರ್ಖಂಡ್ 458/7
ವಿಶಾಖಪಟ್ಟಣಂ: ಕರ್ನಾಟಕ 374, 78/0, ರಾಜಸ್ಥಾನ 148
ಕೋಲ್ಕತಾ: ವಿದರ್ಭ 59, 141/1, ಮಹಾರಾಷ್ಟ್ರ 332
ಮೈಸೂರು: ಮುಂಬೈ 233, 51/2, ಉತ್ತರ ಪ್ರದೇಶ 225.







