ಫೆಡ್ ಟೆನಿಸ್ ಕಪ್: ಝೆಕ್ ರಿಪಬ್ಲಿಕ್‌ಗೆ ಪ್ರಶಸ್ತಿ
ಸ್ಟ್ರಾಸ್‌ಬರ್ಗ್, ನ.14

ಸ್ಟ್ರಾಸ್‌ಬರ್ಗ್, ನ.14: ಕರೋಲಿನಾ ಪ್ಲಿಸ್ಕೋವಾ ಹಾಗೂ ಬಾರ್ಬೊರ ಸ್ಟ್ರಿಕೋವಾ ಅವರ ಸಾಹಸದ ನೆರವಿನಿಂದ ಝೆಕ್ ಗಣರಾಜ್ಯ ತಂಡ ಆರು ವರ್ಷಗಳಲ್ಲಿ ಐದನೆ ಬಾರಿ ಫೆಡ್ ಟೆನಿಸ್ ಕಪ್‌ನ್ನು ಗೆದ್ದುಕೊಂಡಿದೆ. ಇಲ್ಲಿ ನಡೆದ ನಿರ್ಣಾಯಕ ಡಬಲ್ಸ್ ಪಂದ್ಯದಲ್ಲಿ ಫ್ರಾನ್ಸ್‌ನ್ನು ಮಣಿಸಿದ ಝೆಕ್ ತಂಡ ಪ್ರಶಸ್ತಿ ಜಯಿಸಿತು.
ಪಂದ್ಯ 2-2 ರಿಂದ ಸಮಬಲಗೊಂಡಿತ್ತು. ಆಗ ಸ್ಟ್ರಿಕೋವಾರೊಂದಿಗೆ ಡಬಲ್ಸ್ ಪಂದ್ಯವನ್ನು ಆಡಿದ ಯುಎಸ್ ಓಪನ್ ಫೈನಲಿಸ್ಟ್ ಪ್ಲಿಸ್ಕೋವಾ ಫ್ರೆಂಚ್ ಓಪನ್ ಡಬಲ್ಸ್ ಚಾಂಪಿಯನ್ ಕ್ಯಾರೊಲಿನ್ ಗಾರ್ಸಿಯಾ ಹಾಗೂ ಕ್ರಿಸ್ಟಿನಾ ಮ್ಲಾಡೆನೊವಿಕ್‌ರನ್ನು 7-5, 7-5 ಸೆಟ್‌ಗಳ ಅಂತರದಿಂದ ಮಣಿಸಿದರು.
ಝೆಕ್‌ಗೆ ಇದು ಸತತ ಮೂರನೆ ಜಯ ಹಾಗೂ ಒಟ್ಟಾರೆ 10ನೆ ಗೆಲುವು ಇದಾಗಿದೆ. ಅಮೆರಿಕ ತಂಡ ಗರಿಷ್ಠ 17 ಪ್ರಶಸ್ತಿಗಳನ್ನು ಜಯಿಸಿದೆ.
‘‘ಇದು ನಂಬಲಸಾಧ್ಯವಾದುದು. ನಮಗೆ ಬಣ್ಣಿಸಲು ಪದಗಳೇ ಸಿಗುತ್ತಿಲ್ಲ. ನಮಗೆ ವಿಶೇಷ ಅನುಭವವಾಗುತ್ತಿದೆ ಎಂದು ಸಿಕೊವಾ ಹೇಳಿದ್ದಾರೆ. ಸ್ಟ್ರಿಕೋವಾ 2011, 2012, 2014 ಹಾಗೂ 2015ರಲ್ಲಿ ಪ್ರಶಸ್ತಿ ಜಯಿಸಿದ ತಂಡದ ಸದಸ್ಯೆಯಾಗಿದ್ದರು.
ಸಿಂಗಲ್ಸ್ ಪಂದ್ಯವನ್ನು ಜಯಿಸಿದ ಫ್ರಾನ್ಸ್ 2-1 ಮುನ್ನಡೆ ಸಾಧಿಸಿತ್ತು. ಪ್ಲಿಸ್ಕೋವಾ ವಿರುದ್ಧ 6-3, 3-6, 6-3 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ ಗಾರ್ಸಿಯಾ 2003ರ ಬಳಿಕ ಮೊದಲ ಬಾರಿ ಫೆಡ್ ಕಪ್ ಜಯಿಸುವ ವಿಶ್ವಾಸದಲ್ಲಿದ್ದರು.
ಆದರೆ, 2 ಬಾರಿಯ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾ ಬದಲಿಗೆ ಆಡಿದ್ದ ಸ್ಟ್ರಿಕೋವಾ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಅಲಿಝ್ ಕಾರ್ನೆಟ್‌ರನ್ನು 6-2, 7-6(7/4) ಸೆಟ್‌ಗಳಿಂದ ಮಣಿಸಿ 2-2 ರಿಂದ ಸಮಬಲಗೊಳಿಸಿದರು.







