ನಿರ್ಜಲೀಕರಣ ಸಮಸ್ಯೆ: ಅಂಪೈರ್ ಆಸ್ಪತ್ರೆಗೆ ದಾಖಲು

ಮೈಸೂರು, ನ.14: ಮುಂಬೈ ಹಾಗೂ ಉತ್ತರ ಪ್ರದೇಶ ತಂಡಗಳ ನಡುವಿನ ರಣಜಿ ಟ್ರೊಫಿ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆಸ್ಟ್ರೇಲಿಯದ ಅಂಪೈರ್ ಸ್ಯಾಮ್ ನೊಗಾಸ್ಕಿ ನಿರ್ಜಲೀಕರಣ ಸಮಸ್ಯೆಗೆ ಸಿಲುಕಿ ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ಇಲ್ಲಿ ನಡೆದಿದೆ.
ಸ್ಯಾಮ್ ಅನಾರೋಗ್ಯದ ಕಾರಣ ಕರ್ತವ್ಯವನ್ನು ಮೊಟಕುಗೊಳಿಸಿದರು. ಭಾರತದ ವೀರೇಂದ್ರ ಶರ್ಮ ಬದಲಿ ಅಂಪೈರ್ ಆಗಿ ಕರ್ತವ್ಯ ನಿರ್ವಹಿಸಿದರು.
ಇಲ್ಲಿ ರಣಜಿ ಟ್ರೋಫಿಯ ಎರಡನೆ ದಿನದಾಟ ಆರಂಭಕ್ಕೆ ಮೊದಲು ಹೊಟ್ಟೆನೋವು ಹಾಗೂ ವಾಂತಿಯ ಸಮಸ್ಯೆಯನ್ನು ಎದುರಿಸಿದ್ದ ಆಸೀಸ್‌ನ ಅಂಪೈರ್‌ರನ್ನು ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತು.
ಭೇದಿ ಹಾಗೂ ವಾಂತಿಯ ಕಾರಣದಿಂದ ಬೆಳಗ್ಗೆ 7ಗಂಟೆಗೆ ಆಸೀಸ್ ಅಂಪೈರ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ಪರೀಕ್ಷಿಸಿರುವ ವೈದ್ಯರು ನಿರ್ಜಲೀಕರಣವೇ(ದೇಹದಲ್ಲಿ ನೀರಿನಾಂಶ ಕಡಿಮೆ) ಇದಕ್ಕೆ ಕಾರಣ ಎಂದು ಹೇಳಿದ್ದಾರೆ ಎಂದು ಕೆಸ್‌ಸಿಎ ಮೈಸೂರಿನ ಸಂಚಾಲಕ ಬಾಲಚಂದ್ರ ಪಿಟಿಐಗೆ ತಿಳಿಸಿದರು.
ಆಸೀಸ್ ಅಂಪೈರ್ ಲಂಚ್ ವಿರಾಮದ ಬಳಿಕ ಕರ್ತವ್ಯಕ್ಕೆ ಹಾಜರಾಗಿದ್ದಾರೆಂಬ ಬಗ್ಗೆ ಕೆಎಸ್‌ಸಿಎ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ವೈದ್ಯರು ಅವರಿಗೆ ಸಂಪೂರ್ಣ ವಿಶ್ರಾಂತಿಗೆ ಸೂಚಿಸಿದ್ದರು. ಆಸೀಸ್ ಅಂಪೈರ್‌ಗೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ತೆರಳುವಂತೆ ಸಲಹೆ ನೀಡಿದ್ದಾರೆ. ಸ್ಯಾಮ್ ನಾಳೆ ಬೆಂಗಳೂರಿಗೆ ತೆರಳಲಿದ್ದಾರೆ.
ಸ್ಥಳೀಯ ಅಂಪೈರ್ ಕಾರ್ಯನಿರ್ವಹಿಸಲಿದ್ದಾರೆ. ಸದ್ಯಕ್ಕೆ ವಿರೇಂದ್ರ ಶರ್ಮ ಈ ಕೆಲಸ ಮಾಡುತ್ತಿದ್ದಾರೆ ಎಂದು ಬಾಲಚಂದ್ರ ತಿಳಿಸಿದರು.







