ಕ್ರಿಸ್ ಗೇಲ್ ದಾಖಲೆ ಮುರಿದ ಶಬ್ಬೀರ್ ರಹ್ಮಾನ್!

ಮೀರ್ಪುರ, ನ.14: ಕ್ರಿಸ್ ಗೇಲ್ ವಿಶ್ವದ ಸ್ಫೋಟಕ ಬ್ಯಾಟ್ಸ್‌ಮನ್‌ಗಳ ಪೈಕಿ ಮೊದಲ ಸಾಲಿನಲ್ಲಿದ್ದಾರೆ. ತನ್ನ ವೃತ್ತಿಜೀವನದಲ್ಲಿ ಗೇಲ್ ಅವರು ವಿಶ್ವದ ಎಲ್ಲ ಶ್ರೇಷ್ಠ ಬೌಲರ್‌ಗಳ ಬೆವರಿಳಿಸಿದ್ದಾರೆ.
ಬಾಂಗ್ಲಾದೇಶದ ಶಬ್ಬೀರ್ ರಹ್ಮಾನ್ ರವಿವಾರ ಗೇಲ್ ಅವರು ಬಾಂಗ್ಲಾದೇಶ ಪ್ರೀಮಿಯರ್ ಲೀಗ್(ಬಿಪಿಎಲ್)ನಲ್ಲಿ ಮಾಡಿದ್ದ ದಾಖಲೆಯೊಂದನ್ನು ಮುರಿದು ಗಮನ ಸೆಳೆದಿದ್ದಾರೆ.
ರವಿವಾರದ ತನಕ ಗೇಲ್ ಬಿಪಿಎಲ್‌ನಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್(112) ಗಳಿಸಿದ ದಾಂಡಿಗನಾಗಿದ್ದರು. ಇದೀಗ ಶಬ್ಬೀರ್ ರಹ್ಮಾನ್ ಆ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ.
ಬರಿಸಲ್ ಬುಲ್ಸ್ ಹಾಗೂ ರಾಜ್‌ಶಾಹಿ ಕಿಂಗ್ಸ್ ನಡುವೆ ಬಾಂಗ್ಲಾದೇಶದ ಮೀರ್ಪುರದಲ್ಲಿನ ಶೇರ್-ಇ-ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೇವಲ 61 ಎಸೆತಗಳಲ್ಲಿ 122 ರನ್ ಗಳಿಸಿದ ಶಬ್ಬೀರ್ ರಹ್ಮಾನ್ ಅವರು ಗೇಲ್ ದಾಖಲೆಯನ್ನು ಪುಡಿಪುಡಿ ಮಾಡಿದರು.
24ರ ಪ್ರಾಯದ ರಹ್ಮಾನ್ ತನ್ನ ದಾಖಲೆಯ ಸ್ಕೋರ್‌ನಲ್ಲಿ ತಲಾ 9 ಸಿಕ್ಸರ್ ಹಾಗೂ ಬೌಂಡರಿಗಳನ್ನು ಬಾರಿಸಿದ್ದರು. ಆದರೆ, ಶಬ್ಬೀರ್ ರಹ್ಮಾನ್ ಅಬ್ಬರದ ಬ್ಯಾಟಿಂಗ್ ತಂಡಕ್ಕೆ ಗೆಲುವು ತಂದುಕೊಡಲಿಲ್ಲ. 193 ರನ್ ಗುರಿ ಪಡೆದಿದ್ದ ರಾಜ್‌ಶಾಹಿ ತಂಡ ಗೆಲುವಿನ ದಡ ಸೇರಲು ವಿಫಲವಾಯಿತು.







