ಶರೀಅತ್: ಕೇಂದ್ರದ ಹಸ್ತಕ್ಷೇಪ ವಿರುದ್ಧದ ಸಮಾವೇಶ ಮುಂದೂಡಿಕೆ
ಮಂಗಳೂರು, ನ.14: ಶರೀಅತ್ ವಿಷಯದಲ್ಲಿ ಕೇಂದ್ರ ಸರಕಾರದ ಹಸ್ತಕ್ಷೇಪವನ್ನು ವಿರೋಧಿಸಿ ನ.15ರಂದು ನಗರದ ನೆಹರೂ ಮೈದಾನದಲ್ಲಿ ನಡೆಯಲಿದ್ದ ಸಮಾವೇಶವನ್ನು ಮುಂದೂಡಿರುವುದಾಗಿ ದ.ಕ., ಉಡುಪಿ ಜಿಲ್ಲಾ ಮುಸ್ಲಿಮ್ ಸೆಂಟ್ರಲ್ ಕಮಿಟಿ ಅಧ್ಯಕ್ಷ ಮುಹಮ್ಮದ್ ಮಸೂದ್ ತಿಳಿಸಿದ್ದಾರೆ.
ನಗರದ ಖಾಸಗಿ ಹೊಟೇಲ್‌ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಮ್ ಸೆಂಟ್ರಲ್ ಕಮಿಟಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಕಾರದಲ್ಲಿ ನಡೆಯಲಿದ್ದ ಸಮಾವೇಶವನ್ನು ಮುಂದೂಡಲಾಗಿದ್ದು, ಶೀಘ್ರದಲ್ಲೇ ವಿವಿಧ ಸಂಘಟನೆಗಳ ಸಭೆ ಕರೆದು ಸಮಾವೇಶದ ದಿನಾಂಕವನ್ನು ನಿಗದಿಪಡಿಸುವುದಾಗಿ ಹೇಳಿದರು.
ಉಳ್ಳಾಲ ಹಾಗೂ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಅಹಿತರ ಘಟನೆ ನಡೆದ ಹಿನ್ನೆಲೆಯಲ್ಲಿ ಆಯಾ ಠಾಣಾ ವ್ಯಾಪ್ತಿಯಲ್ಲಿ ಸೆ.144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿರುವುದು ಸರಿಯಾಗಿದೆ. ಆದರೆ ಯಾವುದೇ ಅಹಿತಕರ ಘಟನೆ ವರದಿಯಾಗದ ಮಂಗಳೂರಿನಲ್ಲಿ ಹಠಾತ್ ಆಗಿ ನಿಷೇಧಾಜ್ಞೆ ಜಾರಿಗೊಳಿಸಿರುವುದು ಸಮಂಜಸವಲ್ಲ. ನಗರದಲ್ಲಿ ನಿಷೇಧಾಜ್ಞೆ ಜಾರಿಯಾದ ಬಗ್ಗೆ ರವಿವಾರ ರಾತ್ರಿ ಕಮಿಟಿಗೆ ಮಾಹಿತಿ ಲಭಿಸಿದ್ದು, ಈ ಹಿನ್ನೆಲೆಯಲ್ಲಿ ಇಂದು ತುರ್ತಾಗಿ ಸುದ್ದಿಗೋಷ್ಠಿ ಕರೆದು ಸಮಾವೇಶವನ್ನು ಮುಂದೂಡಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಯುನಿವೆಫ್ ಅಧ್ಯಕ್ಷ ರಫೀವುದ್ದೀನ್ ಕುದ್ರೋಳಿ, ಸಲಫಿ ಮೂವ್‌ಮೆಂಟ್‌ನ ಪ್ರ.ಕಾರ್ಯದರ್ಶಿ ಅಬ್ಬುಚ್ಚ, ಮುಸ್ಲಿಮ್ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷ ಹಾಜಿ ಕೋಡಿಜಾಲ್ ಇಬ್ರಾಹೀಂ, ಜಮಾಅತೆ ಇಸ್ಲಾಮಿ ಹಿಂದ್ ಮುಖಂಡ ಕೆ.ಎಂ.ಶರೀಫ್ ಸಾಹೇಬ್, ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಟ್ರಸ್ಟಿ ಹಾಜಿ ಅಹ್ಮದ್ ಬಾಷಾ ತಂಙಳ್, ಎಸ್‌ಡಿಪಿಐ ದ.ಕ. ಜಿಲ್ಲಾ ಪ್ರ.ಕಾರ್ಯದರ್ಶಿ ನವಾಝ್ ಉಳ್ಳಾಲ್, ಐಕ್ಯ ವೇದಿಕೆಯ ಅಧ್ಯಕ್ಷ ಮುಸ್ತಫಾ ಕೆ.ಎಂ., ಜಮೀಯತುಲ್ ಫಲಾಹ್‌ನ ಹಾಜಿ ಸಾದುದ್ದೀನ್ ಸಾಲಿಹ್, ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಕಾರ್ಯದರ್ಶಿಗಳಾದ ಡಿ.ಎಂ.ಅಸ್ಲಮ್, ಹಮೀದ್ ಕುದ್ರೋಳಿ, ಸಿ.ಎಂ.ಮುಸ್ತಫಾ, ಹಾಜಿ ರಿಯಾಝುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.