ಭಾರತದಿಂದ ಕದನವಿರಾಮ ಉಲ್ಲಂಘನೆ: ಶರೀಫ್ ಕಿಡಿ
ಎಲ್ಒಸಿಯಲ್ಲಿ 7 ಪಾಕ್ ಯೋಧರ ಹತ್ಯೆ

ಪಾಕಿಸ್ತಾನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಗ್ವಾದರ್ ಬಂದರಿನ ಮೂಲಕ ಮಧ್ಯಪ್ರಾಚ್ಯ ಹಾಗೂ ಆಫ್ರಿಕಕ್ಕೆ ಚೀನಾದ ಸರಕು ಸಾಗಣೆ ಹಡಗು ಪ್ರಯಾಣಿಸುವುದರೊಂದಿಗೆ ರವಿವಾರ ಹೊಸ ಅಂತಾರಾಷ್ಟ್ರೀಯ ವಾಣಿಜ್ಯ ಮಾರ್ಗವೊಂದು ತೆರೆದುಕೊಂಡಿತು. ಈ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್, ಪಾಕ್ ಸೇನಾ ವರಿಷ್ಠ ಜನರಲ್ ರಾಹಿಲ್ ಶರೀಫ್ ಹಾಗೂ ಪಾಕಿಸ್ತಾನದಲ್ಲಿನ ಚೀನಿ ರಾಯಭಾರಿ ಸುನ್ವಿಡೊಂಗ್ ಭಾಗವಹಿಸಿದ್ದರು.
ಇಸ್ಲಾಮಾಬಾದ್,ನ.14: ಗಡಿನಿಯಂತ್ರಣ ರೇಖೆಯುದ್ದಕ್ಕೂ ಭಾರತೀಯ ಪಡೆಗಳು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಿಂದಾಗಿ ತನ್ನ ಏಳು ಮಂದಿ ಯೋಧರು ಸಾವನ್ನಪ್ಪಿದ್ದಾರೆಂದು ಪಾಕಿಸ್ತಾನ ಸೋಮವಾರ ಹೇಳಿದೆ. ಭಾರತದ ಯಾವುದೇ ಆಕ್ರಮಣದ ವಿರುದ್ಧ ತನ್ನ ಪ್ರದೇಶವನ್ನು ರಕ್ಷಿಸಲು ದೇಶವು ಸರ್ವಸನ್ನದ್ಧವಾಗಿದೆಯೆಂದು ಪಾಕ್ ಪ್ರಧಾನಿ ನವಾಝ್ ಶರೀಫ್ ಘೋಷಿಸಿದ್ದಾರೆ.
ರವಿವಾರ ತಡರಾತ್ರಿ ಭಾರತೀಯ ಪಡೆಗಳು ಭಿಂಬರ್ ವಲಯದಲ್ಲಿ ಕದನವಿರಾಮವನ್ನು ಉಲ್ಲಂಘಿಸಿ ನಡೆಸಿದ ಗುಂಡಿನ ದಾಳಿಯಲ್ಲಿ ಏಳು ಮಂದಿ ಪಾಕ್ ಯೋಧರು ಮೃತಪಟ್ಟಿದ್ದಾರೆಂದು ಪಾಕ್ ಸೇನೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ. ಭಾರತದ ಅಪ್ರಚೋದಿತ ಗುಂಡಿನ ದಾಳಿಗೆ ಪಾಕ್ ಯೋಧರು ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ ಮತ್ತು ಭಾರತದ ಠಾಣೆಗಳ ಮೇಲೆ ಪರಿಣಾಮಕಾರಿಯಾಗಿ ದಾಳಿ ನಡೆಸಿದ್ದಾರೆಂದು ಅದು ಹೇಳಿದೆ. ಭಾರತೀಯ ಪಡೆಗಳ ಗುಂಡಿನ ದಾಳಿಯಲ್ಲಿ ಸಂಭವಿಸಿರುವ ಜೀವಹಾನಿಗೆ ಪ್ರಧಾನಿ ನವಾಝ್ ಶರೀಫ್ ಅವರು ಶೋಕ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತೀಯ ಪಡೆಗಳು ಎಲ್ಒಸಿಯಲ್ಲಿ ನಿರಂತರವಾಗಿ ಕದನವಿರಾಮ ಉಲ್ಲಂಘಿಸುತ್ತಿರುವುದು ತೀರಾ ದುರದೃಷ್ಟಕರವೆಂದು ಅವರು ಹೇಳಿದ್ದಾರೆ.
ಕಾಶ್ಮೀರದಲ್ಲಿ ನಡೆಯುತ್ತಿರುವ ಮಾನವಹಕ್ಕುಗಳ ಘೋರ ಉಲ್ಲಂಘನೆ ಬಗ್ಗೆ ವಿಶ್ವದ ಗಮನವನ್ನು ಬೇರೆಡೆಗೆ ಸೆಳೆಯಲು ಭಾರತೀಯ ಸೇನಾಪಡೆಗಳು ಗಡಿನಿಯಂತ್ರಣ ರೇಖೆಯಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುತ್ತಿದೆಯೆಂದು ಪ್ರಧಾನಿ ಹೇಳಿದ್ದಾರೆ.
ಕಾಶ್ಮೀರದಲ್ಲಿ ನಡೆಯುತ್ತಿರುವ ಮಾನವಹಕ್ಕುಗಳ ಘೋರ ಉಲ್ಲಂಘನೆ ಬಗ್ಗೆ ವಿಶ್ವದ ಗಮನವನ್ನು ಬೇರೆಡೆಗೆ ಸೆಳೆಯಲು ಭಾರತೀಯ ಸೇನಾಪಡೆಗಳು ಗಡಿನಿಯಂತ್ರಣ ರೇಖೆಯಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುತ್ತಿದೆ.
- ನವಾಝ್ ಶರೀಫ್, ಪಾಕ್ ಪ್ರಧಾನಿ







