ರದ್ದಾದ ನೋಟು ಭರ್ತಿ ಮಾಡಲು 50 ದಿನಗಳಲ್ಲಿ ನಿಜವಾಗಿ ಸಾಧ್ಯವೇ? ಇಲ್ಲವೇ?
ಇಲ್ಲಿದೆ ಉತ್ತರ ಹಾಗೂ ಕಾರಣ

ಹೊಸದಿಲ್ಲಿ,ನ.15: ನೋಟು ಚಲಾವಣೆ ರದ್ದತಿ ನಿರ್ಧಾರದ 50 ದಿನಗಳ ನೋವು ಸಹಿಸಿಕೊಳ್ಳುವಂತೆ ಮೋದಿ ಕೋರಿದ್ದಾರೆ. ಆದರೆ ಪ್ರಸ್ತುತ ವೇಗದಲ್ಲಿ ನೋಟುಗಳ ಬದಲಾವಣೆಯಾದರೆ, ಈ ಅವಧಿಯಲ್ಲಿ ಖಂಡಿತವಾಗಿಯಯೂ ನಗದು ವ್ಯವಸ್ಥೆ ಮಾಮೂಲಿ ಸ್ಥಿತಿಗೆ ಬರುವುದು ಸಾಧ್ಯವೇ ಇಲ್ಲ.
ಏಕೆಂದರೆ, ಹಣಕಾಸು ಸಚಿವಾಲಯ ಪ್ರಕಟಿಸಿದ ಅಂಕಿ ಅಂಶಗಳ ಪ್ರಕಾರ, ಅಕ್ಟೋಬರ್ ಕೊನೆಯ ವೇಳೆಗೆ ದೇಶದಲ್ಲಿ 17.50 ಲಕ್ಷ ಕೋಟಿ ಮೌಲ್ಯದ ಕರೆನ್ಸಿ ನೋಟುಗಳು ಚಲಾವಣೆಯಲ್ಲಿದ್ದವು. ಈ ಪೈಕಿ ಶೇಕಡ 84ರಷ್ಟು ಅಂದರೆ 14.50 ಲಕ್ಷ ಕೋಟಿ ನೋಟುಗಳು ಇದೀಗ ರದ್ದಿಯಾಗಿರುವ 500 ಹಾಗೂ 1000 ರೂಪಾಯಿ ನೋಟುಗಳು.
ರವಿವಾರ ಬಿಡುಗಡೆ ಮಾಡಿರುವ ಇನ್ನೊಂದು ಅಂಕಿ ಅಂಶಗಳ ಪ್ರಕಾರ, ನವೆಂಬರ್ 10ರಿಂದ 13ರ ನಡುವೆ ಅಂದರೆ ಮೊದಲ ನಾಲ್ಕು ದಿನಗಳಲ್ಲಿ 50 ಸಾವಿರ ಕೋಟಿ ರೂಪಾಯಿ ಮೌಲ್ಯದ 100 ರೂಪಾಯಿ ಹಾಗೂ 2000 ರೂಪಾಯಿ ನೋಟುಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. ಗ್ರಾಹಕರು ಇದನ್ನು ಬ್ಯಾಂಕ್ ಖಾತೆಯಿಂದ ಹಣ ಪಡೆಯುವ ಮೂಲಕ, ಎಟಿಎಂ ಮೂಲಕ ಅಥವಾ ಬ್ಯಾಂಕ್ ಹಾಗೂ ಅಂಚೆ ಕಚೇರಿ ಕೌಂಟರ್‌ಗಳ ಮೂಲಕ ವಿನಿಮಯ ಮಾಡಿಕೊಂಡಿದ್ದಾರೆ. 18 ಕೋಟಿ ವಹಿವಾಟುಗಳು ನಡೆದಿದ್ದು, ಇಡೀ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಬಹುತೇಕ ಎಟಿಎಂಗಳಲ್ಲಿ ಬೆಳಗ್ಗೆ ನಿಲ್ಲುವ ಸರದಿ ಸಾಲು ಮುಗಿಯುವ ಮುನ್ನವೇ ನಗದು ಖಾಲಿಯಾಗುತ್ತದೆ.
ಬ್ಯಾಂಕುಗಳಿಗೆ ಸಾಕಷ್ಟು ನೋಟುಗಳನ್ನು ಸರಬರಾಜು ಮಾಡಲಾಗುತ್ತದೆ ಎಂಬ ಆರ್‌ಬಿಐ ಭರವಸೆಗೆ ಅನುಗುಣವಾಗಿ ವಹಿವಾಟು ಸಾಧ್ಯವಾಗುತ್ತಿಲ್ಲ. ಆರ್‌ಬಿಐ ಮುದ್ರಣಾಲಯಗಳು ಸಾಕಷ್ಟು ಮುಂಚಿತವಾಗಿಯೇ ನೋಟುಗಳ ಮುದ್ರಣ ಆರಂಭಿಸಿ, ದಾಸ್ತಾನು ಮಾಡಿಕೊಂಡಿದ್ದರೂ ವ್ಯವಸ್ಥೆ ಸರಿಹೋಗುತ್ತಿಲ್ಲ.
ದಿನಕ್ಕೆ 12500 ಕೋಟಿ ರೂಪಾಯಿ ಮೌಲ್ಯದ 2000 ರೂಪಾಯಿ ನೋಟುಗಳನ್ನು ಪ್ರತಿದಿನ ಸರಬರಾಜು ಮಾಡುತ್ತಿದ್ದರೂ, ಈಗ ರದ್ದಾಗಿರುವ ನೋಟುಗಳಷ್ಟು ಪ್ರಮಾಣದ ಹೊಸ ನೋಟುಗಳನ್ನು ವ್ಯವಸ್ಥೆಗೆ ಸರಬರಾಜು ಮಾಡಲು 116 ದಿನ ಬೇಕಾಗುತ್ತದೆ.
ನೋಟು ಚಲಾವಣೆ ರದ್ದತಿಯ ದುಷ್ಪರಿಣಾಮ ಹಾಗೂ ವ್ಯರ್ಥ ಪ್ರಯತ್ನದ ವಿರುದ್ಧ ನೇರ ತೆರಿಗೆ ವ್ಯವಸ್ಥೆ ನಾಲ್ಕು ದಿನಗಳ ಹಿಂದೆ ನೀಡಿರುವ ಎಚ್ಚರಿಕೆ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಕಾದು ನೊಡಬೇಕಾಗಿದೆ.
"ಕೇಂದ್ರೀಯ ನೇರ ತೆರಿಗೆ ಮಂಡಳಿಯ ಅಧ್ಯಕ್ಷ 2012ರಲ್ಲಿ ನೀಡಿದ್ದ, "ಭಾರತ ಹಾಗೂ ವಿದೇಶದಲ್ಲಿರುವ ಕಪ್ಪುಹಣ ತಡೆ ಕ್ರಮಗಳು" ಎಂಬ ವರದಿಯಲ್ಲಿ ಉಲ್ಲೇಖಿಸಿರುವ ಅಂಶವೆಂದರೆ, "ಎಲ್ಲ ಜನರ ಒಂದು ಸಾಮಾನ್ಯ ಆಗ್ರಹವೆಂದರೆ, ಕಪ್ಪುಹಣ ತಡೆಯಬೇಕಾದರೆ ಅಧಿಕ ಮೌಲ್ಯದ ಅಂದರೆ 1000 ರೂಪಾಯಿ 500 ರೂಪಾಯಿ ನೋಟುಗಳ ಚಲಾವಣೆ ರದ್ದುಪಡಿಸಬೇಕು"
"ಈ ಹಿನ್ನೆಲೆಯಲ್ಲಿ ನೋಟು ಚಲಾವಣೆ ರದ್ದತಿ ಕಪ್ಪುಹಣ ತಡೆಗೆ ಪರಿಹಾರವಾಗದು. ಏಕೆಂದರೆ ಇದರಲ್ಲಿ ಬಹುಪಾಲು ಬೇನಾಮಿ ಆಸ್ತಿ, ಚಿನ್ನ ಹಾಗೂ ಆಭರಣ ರೂಪದಲ್ಲಿದೆ" ಎಂದು 109 ಪುಟಗಳ ವರದಿಯಲ್ಲಿ ಸ್ಪಷ್ಟಪಡಿಸಲಾಗಿತ್ತು.
ಇದಕ್ಕಿಂತ ಹೆಚ್ಚಾಗಿ, ಇಂಥ ನಡೆ ಅಧಿಕ ಕರೆನ್ಸಿ ನೋಟುಗಳ ಮುದ್ರಣ ವೆಚ್ಚದ ಹೊರೆಯನ್ನೂ ಹೆಚ್ಚಿಸುತ್ತದೆ. ಇದು ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಅದರಲ್ಲೂ ಮುಖ್ಯವಾಗಿ ಸಾಗಾಣಿಕೆ ವಿಷಯದಲ್ಲಿ, ನಗದು ಸಾಗಾಣಿಕೆಯಲ್ಲಿ ವ್ಯತ್ಯಯ, ಜನರಿಗೆ ಅನನುಕೂಲ ಹಾಗೂ ವೇತನ ನೀಡಿಕೆಯಲ್ಲಿ ಏರುಪೇರಿಗೆ ಇದು ಕಾರಣವಾಗಲಿದೆ ಎಂದು ವರದಿ ಹೇಳಿತ್ತು.
"1946 ಹಾಗೂ 1978ರಲ್ಲಿ ಎರಡು ಬಾರಿ ನೋಟು ಚಲಾವಣೆ ರದ್ದು ಮಾಡಲಾಗಿತ್ತು. ಆದರೆ ಇವೆರಡೂ ವಿಫಲವಾಗಿವೆ. ಆಗ ಕೇವಲ ಶೇಕಡ 15ರಷ್ಟು ಮಾತ್ರ ಅಧಿಕ ಮೌಲ್ಯದ ನೋಟುಗಳು ವಿನಿಮಯವಾಗಿವೆ. ಶೇಕಡ 85ರಷ್ಟು ನೋಟುಗಳು ಬೆಳಕಿಗೇ ಬರಲಿಲ್ಲ. ಸರ್ಕಾರಿ ಏಜೆನ್ಸಿಗಳ ಕಾನೂನು ಕ್ರಮದ ಭೀತಿಯಿಂದ ಮಾಲಕರು ಇದನ್ನು ಬೆಳಕಿಗೇ ತರಲಿಲ್ಲ"







