ಮಂಜನಾಡಿ, ಮೊಂಟೆಪದವಿನಲ್ಲಿ ಬಂದ್

ಕೊಣಾಜೆ, ನ.15: ಕೊಣಾಜೆ ಮತ್ತು ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ದುಷ್ಕರ್ಮಿಗಳ ಅಟ್ಟಹಾಸ ಮುಂದುವರಿದ್ದು, ಮಂಜನಾಡಿ, ವಿದ್ಯಾನಗರ ಬಳಿ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಮಂಜನಾಡಿ ಹಾಗೂ ಮೊಂಟೆಪದವು ನಾಗರಿಕರು ಆಕ್ರೋಶಗೊಂಡು ಮಂಗಳವಾರ ಬೆಳಗ್ಗೆಯಿಂದಲೇ ಈ ಭಾಗದಲ್ಲಿ ವಾಹನ ಸಂಚಾರವನ್ನು ತಡೆದು ಪ್ರತಿಭಟಿಸಿದರು.
ಕಳೆದ ಮೂರು ದಿನಗಳ ಹಿಂದೆ ಮಂಜನಾಡಿಯ ಬಳಿಯ ಅನ್ಸಾರ್ ನಗರ ಹಾಗೂ ಕ್ಯಾಂಟೀನ್ ಬಳಿ ಯುವಕರಿಬ್ಬರಿಗೆ ದುಷ್ಕರ್ಮಿಗಳು ಚೂರಿಯಿಂದ ಇರಿದು ಪರಾರಿಯಾಗಿದ್ದರು. ಅಲ್ಲದೆ ಸೋಮವಾರ ಸಂಜೆ ಇಲ್ಲಿಗೆ ಸಮೀಪದ ಕೈರಂಗಳ ವಿದ್ಯಾನಗರ ಬಳಿ ಮದ್ರಸ ವಿದ್ಯಾರ್ಥಿಗೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳ ತಂಡ ಇರಿದು ಪರಾರಿಯಾಗಿತ್ತು. ಈ ಎರಡೂ ಘಟನೆಗಳು ಮಂಜನಾಡಿ, ಮೊಂಟೆಪದವು, ಕೈರಂಗಳ ಪ್ರದೇಶದಲ್ಲಿ ನಡೆದಿದ್ದು ಇದರಿಂದ ಈ ಭಾಗದ ನಾಗರಿಕರು ಆಕ್ರೋಶಗೊಂಡಿದ್ದರು.
ಕೊಣಾಜೆ ಠಾಣಾ ವ್ಯಾಪ್ತಿಯ ಮೋಂಟುಗೋಳಿ, ಮೊಂಟೆಪದವು, ಮಂಜನಾಡಿ, ಮಂಗಳಾಂತಿ ಹಾಗೂ ಕಲ್ಕಟ್ಟ ಪ್ರದೇಶದಲ್ಲಿ ನಾಗರಿಕರು ಜಮಾಯಿಸಿ ಬಸ್ ಹಾಗೂ ಇತರ ವಾಹನ ಸಂಚಾರವನ್ನು ತಡೆದು ಮಂಗಳವಾರ ಬೆಳಗ್ಗೆ ಸ್ವಯಂ ಘೋಷಿತ ಬಂದ್ ಆಚರಿದರು. ಅಲ್ಲದೆ ಈ ಭಾಗದ ಹೆಚ್ಚಿನ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಮಂಜನಾಡಿ ಗ್ರಾಮ ಪಂಚಾಯತ್ ಕಚೇರಿಯನ್ನು ಬೆಳಿಗ್ಗೆ ಸಾರ್ವಜನಿಕರು ತೆರೆಯಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತ್ ಕಚೇರಿ ಕೂಡಾ ಮುಚ್ಚಲ್ಪಟ್ಟಿತ್ತು.
ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡ ಪರಿಣಾಮ ಮೊಂಟೆಪದವಿನ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಅಲ್ ಮದೀನ ಶಿಕ್ಷಣ ಸಂಸ್ಥೆ, ಅಂಬರ್‌ವ್ಯಾಲ್ಯೂ ಶಾಲೆಗಳಿಗೆ ರಜೆಯನ್ನು ನೀಡಲಾಗಿದೆ. ಆರಂಭದಲ್ಲಿ ನಾಗರಿಕರು ಬಸ್ ಮಾತ್ರ ಅಲ್ಲದೆ ಯಾವುದೇ ವಾಹನ ಸಂಚಾರಕ್ಕೂ ಅವಕಾಶ ನೀಡಿರಲಿಲ್ಲ. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ರಸ್ತೆಗಳಿಗೆ ಇಡಲಾದ ಕಲ್ಲುಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಪೊಲೀಸರು ಈ ಭಾಗದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಆತಂಕಗೊಂಡಿರುವ ಜನತೆ
ಕಳೆದ ಕೆಲವು ದಿನಗಳಿಂದ ಕೊಣಾಜೆ ಹಾಗೂ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳ ವಿಧ್ವಂಸಕ ಕೃತ್ಯ ಮುಂದುವರಿದಿದೆ. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಅಲ್ಲಲ್ಲಿ ಚೂರಿ ಇರಿತ, ಮಸೀದಿಗೆ ಕಲ್ಲು ಎಸೆತ ಪ್ರಕರಣವು ನಡೆದಿದ್ದು ದುಷ್ಕರ್ಮಿಗಳ ಕೃತ್ಯದಿಂದ ಈ ಭಾಗದ ಜನರು ಆತಂಕಕ್ಕೀಡಾಗಿದ್ದಾರೆ. ಕೊಣಾಜೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ದುಷ್ಕೃತ್ಯಗಳು ನಡೆಯುತ್ತಿರುವಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವದಂತಿಗಳೂ ಹಬ್ಬುತ್ತಿರುವುದರಿಂದ ನಾಗರಿಕರು ಮತ್ತಷ್ಟು ಆತಂಕಗೊಳ್ಳುವಂತಾಗಿದೆ. ಕೈರಂಗಳ ವಿದ್ಯಾನಗರದ ಜಲ್ಲಿಕ್ರಾಸ್‌ಬಳಿ ದುಷ್ಕರ್ಮಿಗಳಿಂದ ಇರಿತಕ್ಕೊಳಗಾಗಿ ಕೈಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದ ರಾಝಿಕ್ ಚೇತರಿಸಿದ್ದು, ಸೋಮವಾರ ರಾತ್ರಿ ಆಸ್ಪತ್ರೆಗೆ ಸಚಿವ ಯು.ಟಿ.ಖಾದರ್ ಹಾಗೂ ಮಂಗಳೂರು ವಿದಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಬೋಳಿಯಾರ್ ಭೇಟಿಯಾಗಿ ಬಾಲಕನ ಯೋಗಕ್ಷೇಮ ವಿಚಾರಿಸಿದ್ದಾರೆ.







