ನೋಟು ರದ್ದತಿಯಿಂದ ಕೃಷಿ ಕ್ಷೇತ್ರಕ್ಕೆ ಭಾರೀ ಹೊಡೆತ: ಗುಜರಾತ್ ಬಿಜೆಪಿ ಸಂಸದ ವಿಠಲ್

ಅಹ್ಮದಾಬಾದ್, ನ.15: ಐನೂರು ಹಾಗೂ ಒಂದು ಸಾವಿರ ರೂ. ನೋಟುಗಳನ್ನು ರದ್ದುಗೊಳಿಸಿದ ಕೇಂದ್ರ ಸರಕಾರದ ಕ್ರಮವು ಕೃಷಿ ಕ್ಷೇತ್ರಕ್ಕೆ ಭಾರೀ ಹೊಡೆತ ನೀಡಿದ್ದು, ಸೂಕ್ತ ಪರಿಹಾರೋಪಾಯಗಳನ್ನು ಕೂಡಲೇ ಕೈಗೊಳ್ಳದೇ ಇದ್ದಲ್ಲಿ ಎಲ್ಲಾ ಕೃಷಿ ಮಾರುಕಟ್ಟೆ ಉತ್ಪನ್ನ ಸಮಿತಿಗಳು (ಎಪಿಎಂಸಿ) ಕನಿಷ್ಠ ಎರಡು ತಿಂಗಳುಗಳ ಕಾಲ ಮುಚ್ಚಬೇಕಾಗಬಹುದು ಎಂದು ಪೋರ್ ಬಂದರಿನ ಬಿಜೆಪಿ ಸಂಸದ ವಿಠಲ್ ರಡಾಡಿಯಾ ಹೇಳಿದ್ದಾರೆ.
ರಾಜ್ಯದ ಪ್ರಬಲ ಸಹಕಾರ ಕ್ಷೇತ್ರದೊಂದಿಗೆ ನಿಕಟ ಸಂಬಂಧ ಹೊಂದಿರುವ ವಿಠಲ್ ಹಾಗೂ ಗುಜರಾತಿನ ಇತರ ಬಿಜೆಪಿ ನಾಯಕರುಗಳು ಇಂದು ಭರೂಚ್‌ನಲ್ಲಿ ನಡೆಯುವ ಸಮಾರಂಭವೊಂದರಲ್ಲಿ ಭಾಗವಹಿಸಲಿರುವ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರನ್ನು ಭೇಟಿಯಾಗಲಿದ್ದಾರೆ.
‘‘ಕೃಷಿ ಆರ್ಥಿಕ ಕ್ಷೇತ್ರ ನಗದು ಆಧರಿತವಾಗಿರುವುದನ್ನು ನಾವು ಮೊದಲು ಅರಿಯಬೇಕು-ಬೀಜಗಳಿಂದ ಹಿಡಿದು ಕೀಟನಾಶಕಗಳು ಹಾಗೂ ರಸಗೊಬ್ಬರಗಳ ಖರೀದಿ, ಕೃಷಿ ಕಾರ್ಮಿಕರಿಗೆ ವೇತನ ಹಾಗೂ ಉತ್ಪನ್ನಗಳ ಮಾರಾಟ ಎಲ್ಲವೂ ನಗದು ವ್ಯವಹಾರಗಳಾಗಿವೆ’’ ಎಂದು ರಾಜಕೋಟ್ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ವಿಠಲ್ ಹೇಳಿದರು.
ಅವರ ಪ್ರಕಾರಹಳೆಯ ರದ್ದಾದ ನೋಟುಗಳನ್ನು ಹೊಸ ನೋಟುಗಳಿಗೆ ವಿನಿಮಯ ಮಾಡುವ ಪ್ರಕ್ರಿಯೆಯನ್ನು ನಡೆಸದಂತೆ ಆರ್ ಬಿಐ ಎಲ್ಲಾ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳಿಗೆ ನಿಷೇಧ ಹೇರಿದೆ. ‘‘ನಮ್ಮ ಬ್ಯಾಂಕ್ ಒಂದರಲ್ಲೇ ಲಕ್ಷಗಟ್ಟಲೆ ರೈತು ಖಾತೆಗಳನ್ನು ಹೊಂದಿದ್ದು, ಆರ್ ಬಿಐ ನಿರ್ದೇಶನದಿಂದ ಅವರು ಯಾವ ಬ್ಯಾಂಕಿಂಗ್ ವ್ಯವಹಾರಗಳನ್ನೂ ಮಾಡುವ ಹಾಗಿಲ್ಲ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳದೇ ಹೋದಲ್ಲಿ ಲಕ್ಷಗಟ್ಟಲೆ ರೈತರು ತೀವ್ರ ಸಂಕಷ್ಟ ಎದುರಿಸುತ್ತಾರೆ’’ ಎಂದು ವಿಠಲ್ ಹೇಳಿದರು.
ರಾಜ್ಯದಾದ್ಯಂತ 18 ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳಿದ್ದು ಅವುಗಳಿಗೆ 2,200 ಶಾಖೆಗಳಿವೆ ಹಾಗೂ ಈ ಶಾಖೆಗಳು ಪ್ರಮುಖವಾಗಿ ರೈತರು ಸೇರಿದಂತೆ ಲಕ್ಷೋಪಲಕ್ಷ ಮಂದಿಗೆ ಸೇವೆ ಸಲ್ಲಿಸುತ್ತಿವೆ.
‘‘ರೈತರಿಗೆ ಸಹಕಾರಿ ಬ್ಯಾಂಕುಗಳಲ್ಲಿ ನಗದು ವಿನಿಮಯ ಹಾಗೂ ಇತರ ವ್ಯವಹಾರಗಳಿಗೆ ಆಸ್ಪದ ನೀಡದೇ ಹೋದಲ್ಲಿ ಇಡೀ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರುವುದು’’ ಎಂದು ಇನ್ನೊಬ್ಬ ಬಿಜೆಪಿ ನಾಯಕ, ಮಾಜಿ ಸಂಸದ ಹಾಗೂ ಮಾಜಿ ಕೃಷಿ ಸಚಿವ ದಿಲೀಪ್ ಸಂಘನಿ ಹೇಳಿದ್ದಾರೆ.
ಅವರ ಪ್ರಕಾರ ಸಹಕಾರಿ ಡೈರಿಗಳು ಸಹಕಾರಿ ಬ್ಯಾಂಕುಗಳ ಮೂಲಕ ಲಕ್ಷೋಪಲಕ್ಷ ಹಾಲು ಉತ್ಪಾದಕರಿಗೆ ಹಣ ಸಂದಾಯ ಮಾಡುತ್ತವೆ. ‘‘ನಮ್ಮ ಡೈರಿಗಳಲ್ಲಿ ಹಾಲು ಉತ್ಪಾದಕರಿಗೆ10 ದಿನಗಳಿಗೊಮ್ಮೆ ಮಾತ್ರಹಣ ನೀಡಲಾಗುತ್ತದೆ. ಶೇ.50ಕ್ಕಿಂತ ಹೆಚ್ಚಿನ ಉತ್ಪಾದಕರು ನಗದು ಕೇಳುತ್ತಾರೆ ಇದರಿಂದ ಅವರುಪಶು ಆಹಾರ ಖರೀದಿಸಲು ಸುಲಭವಾಗುತ್ತದೆ’’ ಎಂದು ಅವರು ವಿವರಿಸಿದರಲ್ಲದೆ ತಾವು ಈ ವಿಚಾರ ಚರ್ಚಿಸಲು ಮಂಗಳವಾರ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರನ್ನು ಭೇಟಿಯಾಗುವುದಾಗಿ ಹೇಳಿದರು.
ಪ್ರಧಾನಿ ನವೆಂಬರ್ 8ರಂದು 500 ಹಾಗೂ 1000 ರೂ. ನೋಟುಗಳ ರದ್ದತಿಯನ್ನು ಘೋಷಿಸಿದಂದಿನಿಂದ ರಾಜ್ಯದಾದ್ಯಂತವಿರುವ 207 ಎಪಿಎಂಸಿಗಳು ಬಾಗಿಲು ಮುಚ್ಚಿವೆ. ‘‘ರೈತರಿಗೆ ನೀಡಲು ವರ್ತಕರ ಬಳಿ ಹಣವಿಲ್ಲದೇ ಇರುವುದು ಹಾಗೂ ರೈತರು ಚೆಕ್ ಸ್ವೀಕರಿಸಲು ಒಪ್ಪುವುದಿಲ್ಲವಾದ ಕಾರಣ ಕನಿಷ್ಠ ಮುಂದಿನ ಎರಡು ವಾರಗಳ ತನಕ ಹೆಚ್ಚಿನ ಎಪಿಎಂಸಿಗಳು ಮುಚ್ಚಿರುತ್ತವೆ’’ ಎಂದು ಕಾಂಗ್ರೆಸ್ ಶಾಸಕ ಮತ್ತು ಜಾಮ್ ನಗರ್ ಎಪಿಎಂಸಿ ಅಧ್ಯಕ್ಷ ರಾಘವಜಿ ಪಟೇಲ್ ಹೇಳಿದ್ದಾರೆ.





